×
Ad

ರಶ್ಯವು ಕಾಲದ ಪರೀಕ್ಷೆಯನ್ನು ಗೆದ್ದ ಪಾಲುದಾರ ದೇಶ : ಪ್ರಧಾನಿ ನರೇಂದ್ರ ಮೋದಿ

ಸ್ವದೇಶಿ ನಿರ್ಮಿತ ಎಕೆ-203 ರೈಫಲ್ ಶೀಘ್ರದಲ್ಲೇ ಭಾರತೀಯ ಸೇನೆಗೆ ಸೇರ್ಪಡೆ

Update: 2025-09-25 22:11 IST

ಪ್ರಧಾನಿ ನರೇಂದ್ರ ಮೋದಿ (PTI)

ಗ್ರೇಟರ್ ನೊಯ್ಡಾ, ಸೆ.24: ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಭಾರತದ ಬೆಳವಣಿಗೆಯು ಚೈತನ್ಯಶಾಲಿಯಾಗಿದೆ ಹಾಗೂ ಅದ್ಭುತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಣ್ಣಿಸಿದ್ದಾರೆ.

ಉತ್ತರಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2025 ಅನ್ನು ಉದ್ಘಾಟಸಿ ಅವರು ಮಾತನಾಡುತ್ತಿದ್ದರು.

‘‘ಈ ವ್ಯಾಪಾರಿ ಮೇಳದಲ್ಲಿ ರಶ್ಯ ಪಾಲುದಾರ ರಾಷ್ಟ್ರವಾಗಿದೆ. ಕಾಲದ ಪರೀಕ್ಷೆಯನ್ನು ಗೆದ್ದಿರುವ ಉಭಯದೇಶಗಳ ಪಾಲುದಾರಿಕೆಯನ್ನು ನಾವು ಇನ್ನಷ್ಟು ಮುನ್ನಡೆಸಬಹುದಾಗಿದೆ ’’ಎಂದರು.

ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬಲಪಡಿಸುವ ತನ್ನ ಪ್ರಯತ್ನಗಳನ್ನು ಕೇಂದ್ರ ಸರಕಾರವು ಎರಡು ಪಟ್ಟು ಹೆಚ್ಚಿಸಲಿದೆ ಎಂದು ಹೇಳಿದ ಮೋದಿ, ದೇಶದಲ್ಲಿ ‘ಮೈಕ್ರೋಚಿಪ್‌ಗಳಿಂದ ಹಿಡಿದು ಶಿಪ್(ಹಡಗು)ವರೆಗೂ ಎಲ್ಲವನ್ನೂ ಉತ್ಪಾದಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ಸ್ವದೇಶಿ ಉತ್ಪನ್ನಗಳು ಈಗ ಉತ್ತಮವಾಗುತ್ತಿವೆ, ಬಳಕೆದಾರ ಸ್ನೇಹಿಯಾಗಿದೆ ಹಾಗೂ ದೀರ್ಘಬಾಳಿಕೆಯನ್ನು ಹೊಂದಿರುತ್ತವೆಂಬುದನ್ನು ಜನ ಕಂಡುಕೊಳ್ಳತೊಡಗಿದ್ದಾರೆ. ಆದುದರಿಂದ ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಇರಕೂಡದು ಎಂದು ಅವರು ಸಭೆಯಲ್ಲಿ ಹೇಳಿದರು.

ಪ್ರಧಾನಿಯವರು ಬೃಹತ್ ವ್ಯಾಪಾರಿ ಮೇಳವನ್ನು ಉದ್ಘಾಟಿಸಲು ಸ್ಥಳಕ್ಕೆ ಆಗಮಿಸಿದ ಕೂಡಲೇ ವಸ್ತುಪ್ರದರ್ಶನ ವಿಭಾಗವನ್ನು ಸಂದರ್ಶಿಸಿದರು. ಅಲ್ಲಿ ಅವರು ಮುಂದಿನ ತಲೆಮಾರಿನ ಅನ್ವೇಷಣೆಗಳನ್ನು ವೀಕ್ಷಿಸಿದರು.

► ಸ್ವದೇಶಿ ನಿರ್ಮಿತ ಎಕೆ-203 ರೈಫಲ್ ಶೀಘ್ರದಲ್ಲೇ ಭಾರತೀಯ ಸೇನೆಗೆ ಸೇರ್ಪಡೆ

 ಸ್ವದೇಶಿ ನಿರ್ಮಿತ ಎಕೆ-203 ಅಸಾಲ್ಟ್ ರೈಫಲ್ ಅನ್ನು ಶೀಘ್ರದಲ್ಲೇ ಸೇನೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ವ್ಯಾಪಾರಿ ಮೇಳದಲ್ಲಿ ತಿಳಿಸಿದ್ದಾರೆ.

ಸ್ವದೇಶಿ ನಿರ್ಮಿತ ಎಕೆ-203 ರೈಫಲ್ ಉತ್ಪಾದನೆಗಾಗಿ ಭಾರತ-ರಶ್ಯ ಜಂಟಿ ಸಹಾಭಾಗಿತ್ವದಲ್ಲಿ ಇಂಡೊ-ರಶ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (ಐಆರ್ಆರ್ಪಿಎಲ್) ಕಂಪೆನಿಯನ್ನು ಸ್ಥಾಪಿಸಲಾಗಿದೆ. ಶೇರ್ ಎಂದು ಹೆಸರಿಡಲಾದ ಎಕೆ-203 ಶ್ರೇಣಿಯ ರೈಫಲ್, ಎಕೆ-47 ಹಾಗೂ ಎಕೆ-56 ರೈಫಲ್‌ಗಳಿಗೆ ಹೋಲಿಸಿದರೆ ಅತ್ಯಾಧುನಿಕವಾಗಿದೆ. ಕಲ್ಶಾನಿಕೋವ್ ಸರಣಿಯ ಅತ್ಯಂತ ಅಪಾಯಕಾರಿ ಅಸ್ತ್ರಗಳಲ್ಲಿ ಎಕೆ-47 ಕೂಡಾ ಒಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News