ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ‘ದ್ವಿರಾಷ್ಟ್ರ’ ಪರಿಹಾರ ಸೂತ್ರಕ್ಕೆ ಬೆಂಬಲ ಪುನರುಚ್ಚರಿಸಿದ ಭಾರತ
Photo Credit: ANI
ವಿಶ್ವಸಂಸ್ಥೆ,ಜು.30: ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ದ್ವಿರಾಷ್ಟ್ರ ಸೂತ್ರದ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸುವಂತೆ ಭಾರತವು ಮಂಗಳವಾರ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಮಾವೇಶದಲ್ಲಿ ಕರೆ ನೀಡಿದೆೆ.
ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ಬರೀ ಕಾಗದಪತ್ರಗಳಲ್ಲಿ ಪರಿಹಾರವನ್ನು ಕಂಡುಕೊಳ್ಳುವುದರಲ್ಲಷ್ಟೇ ಅಂತಾರಾಷ್ಟ್ರೀಯ ಸಮುದಾಯ ತೃಪ್ತಿಯಾಗಕೂಡದು. ಕಾರ್ಯಸಾಧ್ಯ ವಿಧಾನಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅದು ಆಗ್ರಹಿಸಿದೆ.
ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ದ್ವಿರಾಷ್ಟ್ರ ಸೂತ್ರವೇ ಪರಿಹಾರವಾಗಿದ್ದು, ಇದರ ಹೊರತಾಗಿ ಬೇರೆ ಯಾವುದೇ ಪರ್ಯಾಯ ಪರಿಹಾರ ಮಾರ್ಗವಿಲ್ಲವೆಂಬ ಅಂತಾರಾಷ್ಟ್ರೀಯ ಸಮುದಾಯದ ಈಗಲೂ ನಂಬಿದೆಯೆಂದು ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಹೇಳಿದ್ದಾರೆ.
‘ಫೆಲೆಸ್ತೀನ್ ಸಮಸ್ಯೆಗೆ ಶಾಂತಿಯುತ ಪರಿಹಾರ ಹಾಗೂ ದ್ವಿರಾಷ್ಟ್ರ ಸಿದ್ದಾಂತದ ಮೂಲಕ ಪರಿಹಾರದ ಅನುಷ್ಠಾನ’ ಕುರಿತ ವಿಶ್ವಸಂಸ್ಥೆಯ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
‘‘ಉದ್ದೇಶಭರಿತ ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ದ್ವಿರಾಷ್ಟ್ರ ಸೂತ್ರದ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುವ ಬಗ್ಗೆ ಗಮನವನ್ನು ಕೇಂದ್ರೀಕರಿಸಬೇಕು ಹಾಗೂ ಸಂಘರ್ಷದಲ್ಲಿ ತೊಡಗಿರುವ ಇತ್ತಂಡಗಳೂ ಪರಸ್ಪರ ನೇರವಾಗಿ ಮಾತುಕತೆಯಲ್ಲಿ ತೊಡಗುವಂತೆ ಮಾಡಬೇಕು’’ ಎಂದು ಹರೀಶ್ ಅವರು ಕರೆ ನೀಡಿದ್ದಾರೆ.
‘ಫೆಲೆಸ್ತೀನ್ ಸಮಸ್ಯೆಗೆ ಶಾಂತಿಯುತ ಪರಿಹಾರ ಹಾಗೂ ದ್ವಿರಾಷ್ಟ್ರ ಸಿದ್ದಾಂತದ ಮೂಲಕ ಪರಿಹಾರದ ಅನುಷ್ಠಾನ’ ಸಮಾವೇಶವು ಜುಲೈ 28ರಿಂದ ಆರಂಭಗೊಂಡಿದ್ದು, 30ರವರೆಗೆ ನಡೆಯಲಿದೆ. ಗಾಝಾ ಯುದ್ಧವು ಅಂತ್ಯಗೊಳ್ಳಬೇಕು ಹಾಗೂ ಹಮಾಸ್ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು ಎಂದು ‘ಫೆಲೆಸ್ತೀನ್ ಸಮಸ್ಯೆಗೆ ಶಾಂತಿಯುತ ಇತ್ಯರ್ಥ ಹಾಗೂ ದ್ವಿರಾಷ್ಟ್ರ ಪರಿಹಾರ ಅನುಷ್ಠಾನ’ ಎಂಬ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾದ 25 ಪುಟಗಳ ದಾಖಲೆಪತ್ರದಲ್ಲಿ ಆಗ್ರಹಿಸಲಾಗಿದೆ.
ಕದನವಿರಾಮದ ಆನಂತರ ಗಾಝಾದಲ್ಲಿ ಹಂಗಾಮಿ ಆಡಳಿತಾತ್ಮಕ ಸಮಿತಿಯನ್ನು ತಕ್ಷಣವೇ ಸ್ಥಾಪಿಸಬೇಕು ಎಂದು ಅದು ತಿಳಿಸಿದೆ.