ಕಾಂಡ್ಲಾದಿಂದ ಒಮಾನ್‌ಗೆ ತೆರಳುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ: ಭಾರತೀಯ ನೌಕಾಪಡೆಯಿಂದ ರಕ್ಷಣಾ ಕಾರ್ಯಾಚರಣೆ
Photo credit: X/@indiannavy
ಹೊಸದಿಲ್ಲಿ: ಭಾರತೀಯ ಮೂಲದ 14 ಸಿಬ್ಬಂದಿಗಳಿದ್ದ ʼಎಂಟಿ ಯಿ ಚೆಂಗ್ 6ʼ( MT Yi Cheng 6) ಎಂಬ ಹಡಗಿನ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ವಿದ್ಯುತ್ ವೈಫಲ್ಯ ಉಂಟಾಗಿದೆ. ತುರ್ತು ಕರೆಗೆ ಸ್ಪಂದಿಸಿ ಒಮಾನ್ ಕೊಲ್ಲಿಯಲ್ಲಿ ನಿಯೋಜಿಸಲಾಗಿದ್ದ ಭಾರತೀಯ ನೌಕಾಪಡೆಯ INS Tabar ತಂಡ ತಕ್ಷಣದ ಸಹಾಯವನ್ನು ಒದಗಿಸಿದೆ ಎಂದು ಹೇಳಿಕೊಂಡಿದೆ.
ಗುಜರಾತ್‌ನ ಕಾಂಡ್ಲಾದಿಂದ ಒಮಾನ್‌ನ ಶಿನಾಸ್‌ಗೆ ಹೋಗುತ್ತಿದ್ದಾಗ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ನೌಕಾಪಡೆಯ ವಕ್ತಾರರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ʼ MT Yi Cheng 6 ನಿಂದ ಬಂದ ತುರ್ತು ಕರೆಗೆ ಒಮಾನ್ ಕೊಲ್ಲಿಯಲ್ಲಿ ನಿಯೋಜಿಸಲಾದ INS Tabar ಸ್ಪಂದಿಸಿದೆ. ಭಾರತೀಯ ಮೂಲದ 14 ಸಿಬ್ಬಂದಿಗಳು ಹಡಗಿನಲ್ಲಿದ್ದರು. ಕಾಂಡ್ಲಾದಿಂದ ಒಮಾನ್‌ನ ಶಿನಾಸ್‌ಗೆ ಸಾಗುತ್ತಿದ್ದಾಗ ಘಟನೆ ನಡೆದಿದೆ. ಹಡಗಿನ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡು ವಿದ್ಯುತ್ ವೈಫಲ್ಯ ಸಂಭವಿಸಿತ್ತುʼ ಎಂದು ಹೇಳಿದ್ದಾರೆ.