×
Ad

ಕೆನಡಾದಲ್ಲಿ ವಿಮಾನಗಳ ಢಿಕ್ಕಿ: ಕೇರಳದ ವಿದ್ಯಾರ್ಥಿ ಸಾವು

Update: 2025-07-10 16:51 IST

PC : timesnownews.com

ಒಟ್ಟಾವಾ: ಕೆನಡಾದ ಮ್ಯಾನಿಟೋಬಾದ ಸ್ಟೈನ್‌ಬಾಚ್‌ನಲ್ಲಿ ಮಂಗಳವಾರ ಬೆಳಿಗ್ಗೆ ಎರಡು ವಿಮಾನಗಳು ಮಧ್ಯ ಆಗಸದಲ್ಲಿ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತ ಇಬ್ಬರು ವಿದ್ಯಾರ್ಥಿ ಪೈಲಟ್‌ಗಳಲ್ಲಿ 23ರ ಹರೆಯದ ಭಾರತೀಯ ಯುವಕ ಸೇರಿದ್ದಾನೆ ಎಂದು ಟೊರೊಂಟೊದಲ್ಲಿಯ ಭಾರತೀಯ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ.

ವಿಮಾನ ಹಾರಾಟ ತರಬೇತಿ ಶಾಲೆಯಲ್ಲಿ ಸಂಭವಿಸಿದ ಈ ದುರಂತದಲ್ಲಿ ಎರಡು ಸಿಂಗಲ್ ಇಂಜಿನ್ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದಿವೆ. ಮೃತ ಭಾರತೀಯ ವಿದ್ಯಾರ್ಥಿಯನ್ನು ಕೇರಳದ ಕೊಚ್ಚಿ ಜಿಲ್ಲೆಯ ತ್ರಿಪುನ್ನಿತ್ತರದ ಸ್ಟ್ಯಾಚ್ಯೂ ನ್ಯೂ ರೋಡ್ ನಿವಾಸಿ ಶ್ರೀಹರಿ ಸುಕೇಶ ಎಂದು ಗುರುತಿಸಲಾಗಿದೆ.

‘ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಯುವ ವಿದ್ಯಾರ್ಥಿ ಪೈಲಟ್ ಶ್ರೀಹರಿ ಸುಕೇಶ ಅವರ ದುರಂತ ಸಾವು ನಮಗೆ ತೀವ್ರ ದುಃಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಕಾನ್ಸುಲೇಟ್ ಜನರಲ್, ‘ನಾವು ದುಃಖತಪ್ತ ಕುಟುಂಬ, ಪೈಲಟ್ ತರಬೇತಿ ಶಾಲೆ ಮತ್ತು ಸ್ಥಳೀಯ ಪೋಲಿಸರೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ಅಗತ್ಯ ನೆರವನ್ನು ಒದಗಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಾರ್ವ್ಸ್ ಏರ್ ಪೈಲಟ್ ಟ್ರೇನಿಂಗ್ ಸ್ಕೂಲ್‌ನ ಅಧ್ಯಕ್ಷ ಆ್ಯಡಂ ಪೆನ್ನರ್ ಅವರು,ಇಬ್ಬರೂ ವಿದ್ಯಾರ್ಥಿಗಳು ಸಣ್ಣ ಸೆಸ್ನಾ ವಿಮಾನಗಳಲ್ಲಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್‌ಗಳನ್ನು ಅಭ್ಯಾಸ ಮಾಡುತ್ತಿದ್ದರು. ಅವರು ಏಕಕಾಲದಲ್ಲಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ದಂತೆ ಕಂಡು ಬಂದಿದ್ದು, ಸಣ್ಣ ರನ್‌ವೇಯಿಂದ ಕೆಲವು ನೂರು ಯಾರ್ಡ್‌ಗಳ ದೂರದಲ್ಲಿ ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದಾರೆ ಎಂದರು.

ವಿಮಾನಗಳಲ್ಲಿ ರೇಡಿಯೊಗಳನ್ನು ಅಳವಡಿಸಲಾಗಿತ್ತು, ಆದರೆ ಇಬ್ಬರು ಪೈಲಟ್‌ಗಳು ಒಬ್ಬನ್ನೊಬ್ಬರು ನೋಡಿರಲಿಲ್ಲ ಎಂದು ತೋರುತ್ತದೆ ಎಂದರು.

ಪೋಲಿಸರ ಪ್ರಕಾರ ಇಬ್ಬರೂ ಪೈಲಟ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೆನಡಾದ ಸವನ್ನಾ ಮೇ ರಾಯ್ಸ್ ಮೃತ ಇನ್ನೋರ್ವ ವಿದ್ಯಾರ್ಥಿ ಪೈಲಟ್ ಆಗಿದ್ದು,ಅವರು ಸುಕೇಶರ ಸಹಪಾಠಿಯಾಗಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News