ಕೇರಳ| ಮುರಿದು ಬಿದ್ದ ವಿವಾಹ ಪೂರ್ವ ಸಂಬಂಧ: ಬೆಳಕಿಗೆ ಬಂದ ನವಜಾತ ಶಿಶುಗಳ ರಹಸ್ಯ ಸಮಾಧಿ!
ಸಾಂದರ್ಭಿಕ ಚಿತ್ರ (PTI)
ಪುದುಕ್ಕಾಡ್: ವಿವಾಹ ಪೂರ್ವ ಸಂಬಂಧದಿಂದಾಗಿ ಹುಟ್ಟಿದ ಎರಡು ನವಜಾತ ಶಿಶುಗಳನ್ನು ರಹಸ್ಯವಾಗಿ ಸಮಾಧಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕೇರಳದ ಪುದುಕ್ಕಾಡ್ ಪೊಲೀಸರು ಯುವಕ-ಯುವತಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಭವಿನ್ ಮತ್ತು ಅನಿಷಾ 2020 ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದು, 2021 ರ ನವೆಂಬರ್ 6 ರಂದು ಅನಿಷಾ ತನ್ನ ಮನೆಯ ಸ್ನಾನಗೃಹದಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದಳು. ಸರಿಯಾದ ಪಾಲನೆ ಇಲ್ಲದ್ದರಿಂದ ಗಂಡು ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡಿದ್ದರಿಂದ ಸಾವನ್ನಪ್ಪಿದ್ದು, ಮಗುವಿನ ಮೃತದೇಹವನ್ನು ತನ್ನ ಮನೆಯ ಆವರಣದಲ್ಲಿ ರಹಸ್ಯವಾಗಿ ಹೂಳಲಾಗಿತ್ತು. ಎಂಟು ತಿಂಗಳ ನಂತರ, ಧಾರ್ಮಿಕ ಆಚರಣೆಗಳನ್ನು ಮಾಡಿ ಸಮುದ್ರದಲ್ಲಿ ಅಸ್ತಿ ಮುಳುಗಿಸುವುದಾಗಿ ಹೇಳಿಕೊಂಡು ಭವಿನ್ ಮಗುವಿನ ಮೂಳೆಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದ.
2024 ರ ಎಪ್ರಿಲ್ 29 ರಂದು ಮತ್ತೆ ಅನಿಷಾ ತನ್ನ ನಿವಾಸದಲ್ಲಿ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮಗು ಜನಿಸಿದ ತಕ್ಷಣ ಮುಖವನ್ನು ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದಾಗಿ ಅನಿಷಾ ಪೊಲೀಸರೆದುರು ಒಪ್ಪಿಕೊಂಡಿದ್ದಾಳೆ. ಎರಡನೇ ಮಗುವಿನ ಮೃತದೇಹವನ್ನು ಸ್ಕೂಟರ್‌ನಲ್ಲಿ ಭವಿನ್ ಆತನ ಮನೆಗೆ ಸಾಗಿಸಿ, ಅಲ್ಲಿ ಅದನ್ನು ಹೂಳಲಾಗಿತ್ತು.
ಶಿಶುಗಳ ಕಳೇಬರದೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ ಭವಿನ್
ವೃತ್ತಿಯಲ್ಲಿ ಪ್ರಯೋಗಾಲಯ ತಂತ್ರಜ್ಞೆಯಾಗಿರುವ ಅನಿಷಾ ಇತ್ತೀಚಿನ ತಿಂಗಳುಗಳಲ್ಲಿ ಭವಿನ್‌ನಿಂದ ದೂರವಾಗಿದ್ದು, ಆಕೆ ಬೇರೆ ವ್ಯಕ್ತಿಯೊಂದಿಗೆ ಮದುವೆಗೆ ತಯಾರಾಗುತ್ತಿದ್ದಾಳೆ ಎಂದು ಭಾವಿಸಿದ ಭವಿನ್, ಎರಡೂ ಮಕ್ಕಳ ಕಳೇಬರದೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ.
ಸದ್ಯ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿದೆ.