×
Ad

ಇಸ್ರೇಲ್ ಮೇಲೆ ಇರಾನ್‌ ನಿಂದ ಹೈಪರ್‌ಸಾನಿಕ್ ಕ್ಷಿಪಣಿ ದಾಳಿ

Update: 2025-06-18 21:44 IST

PC: PTI

ಟೆಹರಾನ್: ಇಸ್ರೇಲ್-ಇರಾನ್ ಸಮರವು ಬುಧವಾರ ಆರನೇ ದಿನವನ್ನು ಪ್ರವೇಶಿರುವಂತೆಯೇ, ಇರಾನ್ ಮಂಗಳವಾರ ತಡರಾತ್ರಿ ಇಸ್ರೇಲ್ ಮೇಲೆ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆಯೆಂದು ಇಸ್ಲಾಮಿಕ್ ರಿಪಬ್ಲಿಕನ್ ಗಾರ್ಡ್ಸ್ ಸೇನೆಯ ಮೂಲಗಳು ತಿಳಿಸಿವೆ.

ಇರಾನ್ ನಿಶ್ಶರ್ತವಾಗಿ ಕ್ಷಮೆಯಾಚಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ ಕೆಲವೇ ತಾಸುಗಳ ಬಳಿಕ ಈ ದಾಳಿ ನಡೆದಿದೆ.ಆದರೆ ಫತಹ್ ಕ್ಷಿಪಣಿ ದಾಳಿಯಿಂದಾಗಿ ತನ್ನ ನೆಲದಲ್ಲಿ ಸಂಭವಿಸಿರುವ ಸಾವುನೋವು, ವಿನಾಶಗಳ ಬಗ್ಗೆ ಇಸ್ರೇಲ್ ಈವರೆಗೆ ಯಾವುದೇ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

ತನ್ನ ಮಿತ್ರ ರಾಷ್ಟ್ರವಾದ ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ದಾಳಿಗಳ ಹಿಂದೆ ತನ್ನ ಯಾವುದೇ ಪಾತ್ರವಿಲ್ಲವೆಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ದಿನದಿಂದ ದಿನಕ್ಕೆ ತನ್ನ ಸಹನೆ ಕ್ಷೀಣಿಸುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲಿ ಯುದ್ಧವಿಮಾನಗಳು ಬುಧವಾರ ಕ್ಷಿಪಣಿ ದಾಳಿ ನಡೆಸಿವೆ. ಶಸ್ತ್ರಾಸ್ತ್ರ ಉತ್ಪಾದನಾ ಘಟಕಗಳು ಹಾಗೂ ಅಣುಶಕ್ತಿಗಾಗಿನ ಸೆಂಟ್ರಿಫ್ಯೂಜ್‌ಗಳನ್ನು ತಯಾರಿಸಲು ಬಳಸುವ ಕಾರ್ಖಾನೆಗಳ ಮೇಲೂ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ತನ್ನ ದಾಳಿಯನ್ನು ಎದುರಿಸಲು ಸಿದ್ಧರಾಗುವಂತೆ ಇರಾನ್, ಇಸ್ರೇಲ್ ರಾಜಧಾನಿ ಟೆಲ್‌ಅವೀವ್‌ನ ನಿವಾಸಿಗಳಿಗೆ ತಿಳಿಸಿದೆ. ಫತಹ್-1 ಕ್ಷಿಪಣಿಗಳು ಅವೀವ್ ನಗರದ ಬಂಕರ್‌ಗಳನ್ನು ಪದೇ ಪದೇ ಅೆುಗಾಡಿಸುತ್ತಿವೆಯೆಂದು ಅದು ಹೇಳಿಕೊಂಡಿದೆ.

ಹೈಪರ್‌ಸಾನಿಕ್ ಕ್ಷಿಪಣಿಗಳು ಶಬ್ಧಕ್ಕಿಂತ ಐದು ಪಟ್ಟು ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅದರ ಜಾಡನ್ನು ಪತ್ತೆಹಚ್ಚಿ, ತಡೆಯುವುದು ಕಷ್ಟಕರವಾಗಿದೆ. ಇದರ ಜೊತೆಗೆ ಇರಾನ್ ಡ್ರೋನ್‌ಗಳ ಹಿಂಡನ್ನೇ ರವಾನಿಸಿದೆ. ಅವುಗಳ ಪೈಕಿ ಎರಡನ್ನು ಡೆಡ್‌ಸೀ ಪ್ರದೇಶದ ಸಮೀಪ ಪತನಗೊಳಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News