×
Ad

ಜಾರ್ಖಂಡ್: ರೈಲಿನಲ್ಲಿ ದರೋಡೆ

Update: 2023-09-24 22:19 IST

                                                                            Photo: NDTV 

ರಾಂಚಿ ಜಾರ್ಖಂಡ್ ನ ಲಾತೇಹಾರ್ ಜಿಲ್ಲೆಯಲ್ಲಿ ಸಂಬಾಲ್ಪುರ-ಜಮ್ಮು ತಾವಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದರೋಡೆಕೋರರು ಕನಿಷ್ಠ 7ಪ್ರಯಾಣಿಕರಿಗೆ ಹಲ್ಲೆ ನಡೆಸಿದ್ದಾರೆ ಹಾಗೂ ಅವರಿಗೆ ಸೇರಿದ 76,000 ರೂಪಾಯಿಯನ್ನು ಲೂಟಿಗೈದಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಪೂರ್ವ ಕೇಂದ್ರ ರೈಲ್ವೆ (ಇಸಿಆರ್)ಯ ಧನ್ಬಾದ್ ವಿಭಾಗದ ವ್ಯಾಪ್ತಿಯ ಲಾತೇಹಾರ್ ಹಾಗೂ ಬರ್ವಾದಿಹ್ ರೈಲು ನಿಲ್ದಾಣಗಳ ನಡುವೆ ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಸುಮಾರು 10ರಿಂದ 12 ದರೋಡೆಕೋರರು ಲಾತೇಹಾರ್ ರೈಲು ನಿಲ್ದಾಣದಲ್ಲಿ ರೈಲು ಹತ್ತಿದರು ಹಾಗೂ ಛಿಪಾದೋಹರ್ ನಿಲ್ದಾಣದ ಸಮೀಪ ಗಾಳಿಯಲ್ಲಿ ಗುಂಡು ಹಾರಿಸಿ ಪ್ರಯಾಣಿಕರಿಗೆ ಬೆದರಿಕೆ ಒಡ್ಡಿದರು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಈ ಘಟನೆ ಎಸ್9 ಕೋಚ್ ನಲ್ಲಿ ನಡೆದಿದೆ. ದರೋಡೆಕೋರರು ಹಲವು ಪ್ರಯಾಣಿಕರಿಗೆ ಥಳಿಸಿದ್ದಾರೆ. ಇದರಿಂದ 7 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. 13 ಪ್ರಯಾಣಿಕರಿಗೆ ಸೇರಿದ 75,800 ರೂ.ವನ್ನು ಲೂಟಿಗೈಯಲಾಗಿದೆ ಎಂದು ಧನ್ಬಾದ್ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಪ್ರಬಂಧಕ ಅಮರೇಶ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ. ಸುಮಾರು 8 ಮೊಬೈಲ್ ಫೋನ್ಗಳನ್ನು ಕೂಡ ದರೋಡೆಕೋರರು ಲೂಟಿಗೈದಿದ್ದಾರೆ. ಇವುಗಳಲ್ಲಿ 4 ಮೊಬೈಲ್ ಫೋನ್ ರವಿವಾರ ಬೆಳಗ್ಗೆ ಸಕ್ರಿಯವಾಗಿರುವುದು ಕಂಡು ಬಂತು. ನಮ್ಮ ತಾಂತ್ರಿಕ ತಂಡ ಅವುಗಳು ಇರುವ ಸ್ಥಳವನ್ನು ಶೋಧಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಮೆಡಿನಿರೈ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ನಿನ್ನೆ ರಾತ್ರಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಡಾಲ್ಟೋನ್ ಗಂಜ್ ಉಪ ವಿಭಾಗೀಯ ದಂಡಾಧಿಕಾರಿ ರಾಜೇಶ್ ಕುಮಾರ್ ಶಾಹ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News