ನ್ಯಾ.ವರ್ಮಾ ನಿವಾಸದಲ್ಲಿ ನಗದು ಪತ್ತೆ ವಿವಾದ| ಅರೆಸುಟ್ಟ ನೋಟುಗಳು ಅತ್ಯಂತ ಶಂಕಾಸ್ಪದವಾಗಿವೆ: ಸಮಿತಿ ವರದಿ
ನ್ಯಾ.ಯಶವಂತ ವರ್ಮಾ | PTI
ಹೊಸದಿಲ್ಲಿ,ಜೂ.19: ಮಾ.14ರಂದು ನ್ಯಾ.ಯಶವಂತ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಅವಘಡದ ಸಂದರ್ಭ ನಗದು ಹಣ ಪತ್ತೆಯಾಗಿದ್ದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಮೂವರು ನ್ಯಾಯಾಧೀಶರ ಸಮಿತಿಯು ಅವರ ವಿರುದ್ಧ ದೋಷಾರೋಪವನ್ನು ಹೊರಿಸಲು ಅವರ ಮೇಲಿನ ಸೂಚ್ಯ ಜವಾಬ್ದಾರಿಯನ್ನು ಒತ್ತಿ ಹೇಳಿದೆ ಎಂದು indianexpress.com ವರದಿ ಮಾಡಿದೆ.
ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ.ಶೀಲ ನಾಗು, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ.ಜಿ.ಎಸ್. ಸಂಧವಾಲಿಯಾ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶೆ ನ್ಯಾ.ಅನು ಶಿವರಾಮನ್ ಅವರನ್ನೊಳಗೊಂಡ ಸಮಿತಿಯು ತನ್ನ 64 ಪುಟಗಳ ವರದಿಯಲ್ಲಿ,ಸರಕಾರವು ಸರಕಾರಿ ನೌಕರರಿಗೆ ನಿವಾಸವನ್ನು ಮಂಜೂರು ಮಾಡಿದಾಗ ಅದು ಶ್ರೀಸಾಮಾನ್ಯನ ದೃಷ್ಟಿಯಲ್ಲಿ ಅನುಮಾನಕ್ಕೆ ಕಾರಣವಾಗಬಹುದಾದ ವಸ್ತುಗಳು ಅಥವಾ ಸಾಮಗ್ರಿಗಳಿಂದ ನಿವಾಸವನ್ನು ಮುಕ್ತವಾಗಿಸಿರುವ ಜವಾಬ್ದಾರಿಯನ್ನು ನಿವಾಸಿಯ ಮೇಲೆ ಹೊರಿಸುತ್ತದೆ ಎಂದು ಹೇಳಿದೆ.
ನ್ಯಾ.ವರ್ಮಾ ವಿರುದ್ಧ ದೋಷಾರೋಪವನ್ನು ಹೊರಿಸಿರುವ ವರದಿಯನ್ನು ಮೇ 4ರಂದು ಆಗಿನ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ಸಂಜೀವ ಖನ್ನಾ ಅವರಿಗೆ ವಿಧ್ಯುಕ್ತವಾಗಿ ಸಲ್ಲಿಸಲಾಗಿತ್ತು. ಅವರು ಅದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ ಬಳಿಕ ಸರಕಾರವು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನ್ಯಾ.ವರ್ಮಾ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಮಂಡಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.
ನ್ಯಾ.ವರ್ಮಾ ನಿವಾಸದಲ್ಲಿ ಬೆಂಕಿಯನ್ನು ಆರಿಸುವ ಸಂದರ್ಭ ಪತ್ತೆಯಾಗಿದ್ದ ಅರೆಸುಟ್ಟ ನೋಟುಗಳು ಅತ್ಯಂತ ಶಂಕಾಸ್ಪದ ವಸ್ತುಗಳಾಗಿವೆ ಹಾಗೂ ನೋಟುಗಳು ಸಣ್ಣ ಮುಖಬೆಲೆಯದಲ್ಲ ಅಥವಾ ಸಣ್ಣ ಮೊತ್ತವಲ್ಲ. ನ್ಯಾ.ವರ್ಮಾ ಅಥವಾ ಅವರ ಕುಟುಂಬ ಸದಸ್ಯರ ಮೌನ ಅಥವಾ ಸಕ್ರಿಯ ಒಪ್ಪಿಗೆಯಿಲ್ಲದೆ ಸ್ಟೋರ್ ರೂಮ್‌ನಲ್ಲಿ ಅವುಗಳನ್ನು ಇರಿಸಲು ಸಾಧ್ಯವಿರಲಿಲ್ಲ ಎನ್ನುವದು ಅನುಮಾನವನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ತಿಳಿಸಿರುವ ವರದಿಯು, ಆದ್ದರಿಂದ ಎಲ್ಲ ಸಮಯದಲ್ಲಿಯೂ ಬಿಗು ಭದ್ರತೆಯನ್ನು ಹೊಂದಿರುವ ಹಾಲಿ ನ್ಯಾಯಾಧೀಶರ ಸ್ಟೋರ್ ರೂಮ್‌ನಲ್ಲಿ ಕುಟುಂಬದವರಿಗೆ ತಿಳಿಯದಂತೆ ನೋಟುಗಳನ್ನು ಇರಿಸುವುದು ಬಹುತೇಕ ಅಸಾಧ್ಯ. ಅಲ್ಲದೆ ಆರಕ್ಕೂ ಹೆಚ್ಚು ಸಿಬ್ಬಂದಿ ವಸತಿಗೃಹಗಳನ್ನು ಹೊಂದಿರುವ ನಿವಾಸವು ಹೆಚ್ಚಿನ ಸಂಖ್ಯೆಯ ಹಳೆಯ ಮತ್ತು ವಿಶ್ವಸಾರ್ಹ ಮನೆಗೆಲಸದಾಳುಗಳನ್ನೂ ಹೊಂದಿದೆ ಎಂದು ಹೇಳಿದೆ.
ಪೋಲಿಸರ ಲೋಪಗಳು ಮತ್ತು ಬೆಂಕಿಯನ್ನು ನಂದಿಸಿದ ತಕ್ಷಣ ತುಘ್ಲಕ್ ರೋಡ್ ಪೋಲಿಸರು ಏಕೆ ಪಂಚನಾಮೆಯನ್ನು ಮಾಡಿರಲಿಲ್ಲ ಎಂಬ ವಿಷಯ ಕುರಿತಂತೆ ಸಮಿತಿಯು,ಪೋಲಿಸರು ಅಜಾಗರೂಕತೆ ತೋರಿಸಿದ್ದು ನಿಜ,ಆದರೆ ವಿಷಯವು ಅವರ ವ್ಯಾಪ್ತಿಗೆ ಮೀರಿದ್ದಾಗಿತ್ತು ಎಂದು ಹೇಳಿದೆ.
ಪೋಲಿಸ್ ಅಥವಾ ಅಗ್ನಿಶಾಮಕ ಸಿಬ್ಬಂದಿಯ ಕ್ರಮದಲ್ಲಿ ದೋಷ ಅಥವಾ ನಿಷ್ಕ್ರಿಯತೆಯನ್ನು ಕಂಡು ಹಿಡಿಯುವುದು ಸಮಿತಿಯ ಕೆಲಸವಲ್ಲ ಎಂದೂ ವರದಿಯು ಸ್ಪಷ್ಟಪಡಿಸಿದೆ.
ಗಮನಾರ್ಹವಾಗಿ ವರದಿಯು,ನ್ಯಾ.ವರ್ಮಾ ಮತ್ತು ಅವರ ಪುತ್ರಿ ಸೇರಿದಂತೆ 55 ಸಾಕ್ಷಿಗಳ ವಿಚಾರಣೆಯಲ್ಲಿ ಸಹಜ ನ್ಯಾಯದ ತತ್ವವನ್ನು ಅನುಸರಿಸಲಾಗಿದೆ,ಆದರೆ ಸಾಕ್ಷಿಗಳ ಪಾಟೀಸವಾಲು ಅಥವಾ ಕಾನೂನು ಪ್ರಾತಿನಿಧ್ಯಕ್ಕೆ ಅವಕಾಶವನ್ನು ನೀಡಿರಲಿಲ್ಲ ಎಂದು ನಿರ್ದಿಷ್ಟವಾಗಿ ಹೇಳಿದೆ.