ಕಲ್ಯಾಣ್ ಬ್ಯಾನರ್ಜಿ ರಾಜೀನಾಮೆ ಅಂಗೀಕಾರ | ಟಿಎಂಸಿಯ ಲೋಕಸಭಾ ಮುಖ್ಯ ಸಚೇತಕರಾಗಿ ದಸ್ತಿದಾರ್ ನೇಮಕ
ಕಾಕೋಲಿ ಘೋಷ | PC : ANI
ಕೋಲ್ಕತಾ,ಆ.5: ಕಲ್ಯಾಣ್ ಬ್ಯಾನರ್ಜಿ ಅವರು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಮಂಗಳವಾರ ಅಂಗೀಕರಿಸಿರುವ ಟಿಎಂಸಿ, ಅವರ ಸ್ಥಾನಕ್ಕೆ ಕಾಕೋಲಿ ಘೋಷ್ ದಸ್ತಿದಾರ್ ಅವರನ್ನು ನೇಮಕಗೊಳಿಸಿದೆ.
ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿಯವರು ಸತಾಬ್ದಿ ರಾಯ್ ಅವರನ್ನು ದಸ್ತಿದಾರ್ ಸ್ಥಾನದಲ್ಲಿ ಲೋಕಸಭೆಯಲ್ಲಿ ಪಕ್ಷದ ಉಪನಾಯಕಿಯನ್ನಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ ಎಂದು ಪಕ್ಷವು ಎಕ್ಸ್ ಪೋಸ್ಟ್ ನಲ್ಲಿ ಪ್ರಕಟಿಸಿದೆ.
ಮಮತಾ ಸೋಮವಾರ ಅಭಿಷೇಕ್ ಬ್ಯಾನರ್ಜಿಯವರನ್ನು ಹಿರಿಯ ಸಂಸದ ಸುದೀಪ್ ಬಂದೋಪಾಧ್ಯಾಯ ಅವರ ಸ್ಥಾನದಲ್ಲಿ ಲೋಕಸಭೆಯಲ್ಲಿ ಟಿಎಂಸಿ ನಾಯಕರನ್ನಾಗಿ ನೇಮಕಗೊಳಿಸಿದ್ದರು.
ಮಮತಾ ಸೋಮವಾರ ಪಕ್ಷದ ಸಂಸದರೊಂದಿಗೆ ವರ್ಚುವಲ್ ಸಭೆಯಲ್ಲಿ ಕಲ್ಯಾಣ್ ಬ್ಯಾನರ್ಜಿಯವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕಲ್ಯಾಣ್ ಬ್ಯಾನರ್ಜಿ ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದರು.