×
Ad

ನೂತನ ಸಂಸತ್‌ ಭವನಕ್ಕೆ ಕಂಗನಾ, ಇಶಾ ಸೇರಿದಂತೆ ಹಲವು ಕಲಾವಿದೆಯರು ಭೇಟಿ; ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಮೋದಿಗೆ ಶ್ಲಾಘನೆ

Update: 2023-09-20 15:50 IST

Photo: PTI

ಹೊಸದಿಲ್ಲಿ: ಸಿನಿಮಾ, ಫ್ಯಾಷನ್, ನೃತ್ಯ ಮತ್ತು ಸಂಗೀತ ಕ್ಷೇತ್ರಗಳ ಹಲವಾರು ಮಹಿಳಾ ಕಲಾವಿದರು ಮಂಗಳವಾರ ಹೊಸ ಸಂಸತ್ ಭವನಕ್ಕೆ ಭೇಟಿ ನೀಡಿ, ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸುವಾಗ ಕಲಾವಿದೆಯರು ಉಪಸ್ಥಿತರಿದ್ದರು.

ನಟಿಯರಾದ ಕಂಗನಾ ರಣಾವತ್ ಮತ್ತು ಇಶಾ ಗುಪ್ತಾ, ಫ್ಯಾಷನ್ ಡಿಸೈನರ್ ರಿನಾ ಢಾಕಾ, ಗಾಯಕಿ ಸಪ್ನಾ ಚೌಧರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೃತ್ಯಗಾರ್ತಿಯರಾದ ನಳಿನಿ ಮತ್ತು ಕಮಲಿನಿ ಮತ್ತು ಗಾಯಕಿ ಪದ್ಮಶ್ರೀ ಸುಮಿತ್ರಾ ಗುಹಾ ಮೊದಲಾದವರಿಗೆ ಆಹ್ವಾನ ನೀಡಲಾಗಿತ್ತು.

ಈ ವೇಳೆ ಮಾತನಾಡಿದ ಕಂಗನಾ, ಇಂದು ರಾಷ್ಟ್ರಕ್ಕೆ ಮತ್ತು ದೇಶದ ಮಹಿಳೆಯರಿಗೆ ಐತಿಹಾಸಿಕ ದಿನ ಬಣ್ಣಿಸಿದ್ದಾರೆ.

“ಬಿಜೆಪಿ ಇಂದು ಬೇರೆ ಯಾವುದೇ ಮಸೂದೆಯನ್ನು ತರಬಹುದಿತ್ತು, ಆದರೆ ಅವರು ಮಹಿಳಾ ಸಬಲೀಕರಣವನ್ನು ಆಯ್ಕೆ ಮಾಡಿದ್ದಾರೆ. ಇದು ಅವರ ಚಿಂತನೆಯನ್ನು ತೋರಿಸುತ್ತದೆ. ದೇಶವು ಸಮರ್ಥರ ಕೈಯಲ್ಲಿದೆ ಎಂದು ನಾನು ಭಾವಿಸುತ್ತೇನೆ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು" ಎಂದು ಕಂಗನಾ ಅವರು ಹೇಳಿದರು.

"ಇದು ಅತ್ಯಂತ ಪ್ರಗತಿಪರ ಚಿಂತನೆಯಾಗಿದೆ. ಈ ಮೀಸಲಾತಿ ಮಸೂದೆಯು ಮಹಿಳೆಯರಿಗೆ ಸಮಾನ ಅಧಿಕಾರವನ್ನು ನೀಡುತ್ತದೆ. ಇದು ನಮ್ಮ ದೇಶಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ. ಹೊಸ ಸಂಸತ್ತಿನ ಮೊದಲ ದಿನದಂದು ಮಂಡನೆಯಾಗುತ್ತಿರುವ ಮಸೂದೆಯು ಪ್ರಗತಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಮಹಿಳೆಯರ ಧ್ವನಿಯನ್ನು ಆಲಿಸುವುದು ನಿರ್ಣಾಯಕವಾಗಿದೆ. ಈ ಮಸೂದೆಯು ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ” ಎಂದು ನಟಿ ಇಶಾ ಗುಪ್ತಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News