ಕೇರಳ: ಹೊಸದಾಗಿ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿ ಕುಸಿತ; ಕಾಮಗಾರಿ ಗುಣಮಟ್ಟದ ಬಗ್ಗೆ ಆತಂಕ ಸೃಷ್ಟಿ
PC : PTI
ತಿರುವನಂತಪುರ: ಕೇರಳದ ಮಲಪ್ಪುರಂ ಜಿಲ್ಲೆಯ ಕೂರಿಯಾಡ್ ಸಮೀಪ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ಭಾಗಶಃ ಕುಸಿದಿದ್ದು,ಸ್ಥಳೀಯ ಅಧಿಕಾರಿಗಳು, ಇಂಜಿನಿಯರ್‌ಗಳು ಮತ್ತು ನಿವಾಸಿಗಳು ಯೋಜನೆಯ ಅನುಷ್ಠಾನದಲ್ಲಿ ಆಳವಾದ ಸಮಸ್ಯೆಗಳನ್ನು ಬೆಟ್ಟು ಮಾಡಿದ್ದಾರೆ.
ಮೇ 19ರಂದು ಸಂಭವಿಸಿದ ಕುಸಿತದಿಂದಾಗಿ ಪ್ರಾಣಹಾನಿ ಉಂಟಾಗಿಲ್ಲವಾದರೂ 644 ಕಿ.ಮೀ.ಉದ್ದದ ಷಟ್ಪಥ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಬಗ್ಗೆ ರಾಜ್ಯಾದ್ಯಂತ ಕಳವಳಗಳನ್ನು ಸೃಷ್ಟಿಸಿದೆ. ಹೆದ್ದಾರಿಯ ಹೆಚ್ಚಿನ ಭಾಗವು ನೀರಿನಿಂದ ತುಂಬಿದ, ದುರ್ಬಲ ಭೂಪ್ರದೇಶದ ಮೂಲಕ ಹಾದುಹೋಗುತ್ತದೆ. ಮೇ 20ರಂದು ಕಾಸರಗೋಡಿನಲ್ಲಿ ಸರ್ವಿಸ್ ರಸ್ತೆಯ ಭಾಗವು ನೀರಿನಲ್ಲಿ ಮುಳುಗಿದ ಬಳಿಕ ಬಿರುಕುಗಳು ಸ್ಪಷ್ಟವಾಗಿ ಗೋಚರಿಸಿದ್ದವು.
ಕೂರಿಯಾಡ್‌ನಲ್ಲಿ ಕುಸಿದ ರಸ್ತೆಯು ಸ್ವಾಧೀನ ಪಡಿಸಿಕೊಂಡಿದ್ದ ಭತ್ತದ ಗದ್ದೆಯಲ್ಲಿ ನಿರ್ಮಾಣಗೊಂಡಿದ್ದು ಸರ್ವಿಸ್ ರಸ್ತೆ ಮತ್ತು ತಡೆಗೋಡೆಗೆ ಹಾನಿಯುಂಟಾಗಿದೆ. ಅವಶೇಷಗಳಲ್ಲಿ ನಾಲ್ಕು ವಾಹನಗಳು ಸಿಕ್ಕಿಹಾಕಿಕೊಡಿದ್ದು,ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೋಝಿಕೋಡ್ ಮತ್ತು ತ್ರಿಶೂರುಗಳ ಕೆಲವು ಭಾಗಗಳಲ್ಲಿಯೂ ರಸ್ತೆಗಳಲ್ಲಿ ಇದೇ ರೀತಿಯ ಬಿರುಕುಗಳು ಮತ್ತು ಹಾನಿಯುಂಟಾಗಿದ್ದು,ನಿರ್ಮಾಣ ಗುಣಮಟ್ಟ ಮತ್ತು ಆಯ್ಕೆ ಮಾಡಿಕೊಂಡಿರುವ ಮಾರ್ಗದ ಸೂಕ್ತತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಭಾಗಶಃ ಕುಸಿದಿರುವ ರಸ್ತೆಯು ಮಲಪ್ಪುರಂನ ಪಣಂಪುಳ ಸೇತುವೆಯಿಂದ ಕೇವಲ 600 ಮೀ.ಅಂತರದಲ್ಲಿದೆ. ರಸ್ತೆಯನ್ನು ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಭತ್ತದ ಗದ್ದೆಯ ಮೇಲೆ ನಿರ್ಮಿಸಲಾಗಿದೆ. ಮಳೆಗಾಲ ಇನ್ನೂ ಆರಂಭಗೊಂಡಿಲ್ಲ ಮತ್ತು ರಸ್ತೆಯು ಈಗಾಗಲೇ ಕುಸಿದಿದೆ. ಈ ಪ್ರದೇಶದಲ್ಲಿ ಅವರು ಫ್ಲೈಓವರನ್ನು ನಿರ್ಮಿಸಬೇಕಾಗಿತ್ತು. ರಸ್ತೆಯು ಪಳಂಪುಳ ಮತ್ತು ಕಡಲುಂಡಿಪುಳ ನದಿಗಳಿಗೆ ಸಮೀಪವಿರುವುದು ಇದನ್ನು ಅತ್ಯಂತ ಅಪಾಯ ವಲಯವನ್ನಾಗಿಸಿದೆ ಎಂದು ಹೇಳಿದ ಮಲಪ್ಪುರಂ ಜಿಲ್ಲೆಯ ತಿರುರಂಗಡಿ ನಗರಸಭೆಯ ಅಧ್ಯಕ್ಷ ಕೆ.ಪಿ.ಮುಹಮ್ಮದ್ ಕುಟ್ಟಿಯವರು,ತಜ್ಞರ ಸಮಿತಿಯೊಂದು ಸ್ಥಳಕ್ಕೆ ಭೇಟಿ ನೀಡಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.
ಈ ನಡುವೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಕಳಪೆ ನಿರ್ಮಾಣ ಕಾಮಗಾರಿಯ ಆರೋಪಗಳನ್ನು ತಳ್ಳಿಹಾಕಿದೆ. ಇತ್ತೀಚಿನ ಮಳೆಯಿಂದಾಗಿ ಭತ್ತದ ಗದ್ದೆಯ ಕೆಳಗಿನ ಮಣ್ಣು ಸಡಿಲಗೊಂಡಿದ್ದು ಕುಸಿತಕ್ಕೆ ಕಾರಣವಾಗಿದೆ ಎಂದು ಅದು ಸಮಜಾಯಿಷಿ ನೀಡಿದೆ.
ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿದ್ದ ಕೆಎನ್‌ಆರ್ ಕನಸ್ಟ್ರಕ್ಷನ್ ಕಂಪನಿಯನ್ನು ಕೇಂದ್ರ ಸರಕಾರವು ನಿಷೇಧಿಸಿದ್ದು, ಯೋಜನೆಯೊಂದಿಗೆ ಗುರುತಿಸಿಕೊಂಡಿದ್ದ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.