×
Ad

ಕೇರಳ: ‘ಗುಂಪು ವಿಚಾರಣೆ’ಯಿಂದ ನೊಂದ ಮಹಿಳೆ ಆತ್ಮಹತ್ಯೆ; ಮೂವರ ಬಂಧನ

Update: 2025-06-19 20:58 IST

ತಿರುವನಂತಪುರ: ಪುರುಷರ ಗುಂಪೊಂದು ತನ್ನನ್ನು ಸಾರ್ವಜನಿಕವಾಗಿ ಅಪಮಾನಿಸಿದ್ದರಿಂದ ನೊಂದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕೇರಳದ ತಲಶ್ಯೇರಿ ಜಿಲ್ಲೆಯಲ್ಲಿ ಗುರುವಾರ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು 40 ವರ್ಷ ವಯಸ್ಸಿನ ರಸೀನಾ ಎಂದು ಗುರುತಿಸಲಾಗಿದ್ದು, ಪಿಣರಾಯಿ ಗ್ರಾಮದಲ್ಲಿರುವ ಸ್ವಗೃಹದಲ್ಲಿ ಆಕೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರವಿವಾರ ಸಂಜೆ ಪುರುಷರ ಗುಂಪೊಂದು ಆಕೆಯನ್ನು ಸಾರ್ವಜನಿಕರ ಎದುರು ನಿಂದಿಸಿತ್ತು ಹಾಗೂ ಆಕೆಯ ಸ್ನೇಹಿತನೊಬ್ಬನನ್ನು ‘ಗುಂಪು ವಿಚಾರಣೆಗೆ’ ಒಳಪಡಿಸಿತ್ತೆನ್ನಲಾಗಿದೆ. ಇದರಿಂದ ಖಿನ್ನಳಾದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಚೀಟಿಯೊಂದು ಪತ್ತೆಯಾಗಿದ್ದು, ಅದನ್ನು ಅನುಸರಿಸಿ ಪೊಲೀಸರು ಎಸ್‌ಡಿಪಿಐ ಪಕ್ಷದ ಮೂವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಬಂಧಿತರನ್ನು ವಿ.ಎಸ್. ಮುಬಶೀರ್(28), ಕೆ.ಎ.ಫೈಸಲ್(34) ಹಾಗೂ ವಿ.ಕೆ. ರಫ್ನಾಸ್ (24) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಸ್ಥಳೀಯ ನಿವಾಸಿಗಳೆಂದು ತಿಳಿದುಬಂದಿದೆ.

ರಸಿನಾ ಹಾಗೂ ಆಕೆಯ ಸ್ನೇಹಿತನನ್ನು ಈ ಗುಂಪು ಮಸೀದಿಯೊಂದರ ಬಳಿ ಪ್ರಶ್ನಿಸಿತ್ತು ಹಾಗೂ ಆತನ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಹಲವು ತಾಸುಗಳವರೆಗೆ ಆತನನ್ನು ವಶದಲ್ಲಿರಿಸಿಕೊಂಡಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ರಸಿನಾಳ ಸ್ನೇಹಿತನಿಂದ ಮೊಬೈಲ್‌ಫೋನ್ ಹಾಗೂ ಟ್ಯಾಬ್ಲೆಟ್ ಅನ್ನು ಕಿತ್ತುಕೊಂಡ ಗುಂಪು, ಆತನ ಕುಟುಂಬಿಕರನ್ನು ಸ್ಥಳೀಯ ಎಸ್‌ಡಿಪಿಐ ಪಕ್ಷದ ಕಚೇರಿಗೆ ಕರೆಸಿಕೊಂಡಿತ್ತು ಹಾಗೂ ರವಿವಾರ ತಡರಾತ್ರಿಯ ಹೊತ್ತಿಗೆ ಆತನನ್ನು ಬಿಡುಗಡೆಗೊಳಿಸಿತ್ತು.

ಬಂಧಿತ ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಯಲ್ಲಿರಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವರು ಶಂಕಿತ ಆರೋಪಿಗಳು ಭಾಗಿಯಾಗಿರುವ ಸಾಧ್ಯತೆಯಿದ್ದು, ಮುಂದಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News