×
Ad

ವಂದೇಭಾರತ್ ರೈಲಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಕ್ಕಳಿಂದ ಆರೆಸ್ಸೆಸ್ ಗೀತೆ: ತನಿಖೆಗೆ ಆದೇಶಿಸಿದ ಕೇರಳ ಸರಕಾರ

Update: 2025-11-09 18:51 IST

Credit: X/@GMSRailway

ತಿರುವನಂತಪುರಂ: ಎರ್ನಾಕಲುಂನಿಂದ ಬೆಂಗಳೂರಿಗೆ ಸಂಚರಿಸುವ ವಂದೇಭಾರತ್ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ರೈಲ್ವೆ ವಲಯವು ಶಾಲಾ ಮಕ್ಕಳಿಂದ ರೈಲಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಂಗಾ ಗೀತ್ ಗೀತೆಯನ್ನು ಹಾಡಿಸಿತ್ತು ಎನ್ನಲಾಗಿರುವ ಘಟನೆಯ ಕುರಿತು ಶನಿವಾರ ಕೇರಳ ಸರಕಾರ ತನಿಖೆಗೆ ಆದೇಶಿಸಿದೆ.

ಈ ಸಂಬಂಧ ತನಿಖೆ ನಡೆಸಿ, ವರದಿಯೊಂದನ್ನು ಸಲ್ಲಿಸುವಂತೆ ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಕೇರಳ ಸಾಮಾನ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಆದೇಶಿಸಿದ್ದಾರೆ. ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಯಾವುದೇ ಗುಂಪಿನ ಕೋಮುವಾದಿ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಸರಕಾರಿ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ರಾಜಕೀಕರಣಗೊಳಿಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಈ ಘಟನೆಯ ಕುರಿತು ಕೂಡಲೇ ತನಿಖೆ ನಡೆಸಿ, ವರದಿಯೊಂದನ್ನು ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

“ಅಧಿಕೃತ ಸರಕಾರಿ ಸರಕಾರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಡುವಲ್ಲಿ ಏನಾದರೂ ಲೋಪವಾಗಿದೆಯೇ ಎಂಬುದನ್ನು ಈ ತನಿಖೆ ಪರಿಶೀಲಿಸಲಿದೆ. ತನಿಖಾ ವರದಿಯಲ್ಲಿನ ಅಂಶಗಳನ್ನು ಆಧರಿಸಿ ಮತ್ತಷ್ಟು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದೂ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News