ಭಾರತದ ಮೇಲೆ ದಾಳಿಗೆ ಆದೇಶಿಸಿದ್ದ ಖಾಲಿಸ್ತಾನಿ ಮುಖಂಡ ನಿಜ್ಜರ್: ಗುಪ್ತಚರ ಸಂಸ್ಥೆ ವರದಿ
Photo: NDtv
ಹೊಸದಿಲ್ಲಿ: ಭಾರತದಲ್ಲಿ ಉಗ್ರಗಾಮಿ ಎಂದು ಕರೆಸಿಕೊಂಡಿದ್ದ ಹತ್ಯೆಗೀಡಾದ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್, 1980ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮತ್ತು ಸಣ್ಣ ವಯಸ್ಸಿನಿಂದಲೇ ಸ್ಥಳೀಯ ರೌಡಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ವಿಸ್ತೃತ ವರದಿಯನ್ನು ಭಾರತೀಯ ಪ್ರಾಧಿಕಾರಗಳು ಸಿದ್ಧಪಡಿಸಿವೆ ಎಂದು ndtv.com ವರದಿ ಮಾಡಿದೆ.
1996ರಲ್ಲಿ ಕೆನಡಾಗೆ ಪರಾರಿಯಾಗಿದ್ದ ನಿಜ್ಜರ್, ಅಲ್ಲಿ ಟ್ರಕ್ ಚಾಲಕನಂಥ ಕಡಿಮೆ ದರ್ಜೆಯ ಕೆಲಸ ಮಾಡುತ್ತಾ, ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ತರಬೇತಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಕೆನಡಾ ನೆಲದಲ್ಲಿ ಆಶ್ರಯವನ್ನು ಪಡೆದಿದ್ದಾಗ, ಪಂಜಾಬ್ ನಲ್ಲಿ ಹಲವಾರು ಹತ್ಯೆ ಹಾಗೂ ದಾಳಿಗಳಿಗೆ ಆದೇಶಿಸಿದ್ದ ಎಂದೂ ಆ ವರದಿಯಲ್ಲಿ ಹೇಳಲಾಗಿದೆ.
ಪಂಜಾಬ್ ನ ಜಲಂಧರ್ ಜಿಲ್ಲೆಯ ಭರ್ ಸಿಂಗ್ ಪುರ ಗ್ರಾಮದ ನಿವಾಸಿಯಾದ ಹರ್ದೀಪ್ ಸಿಂಗ್ ನಿಜ್ಜರ್, ಗುರ್ನೆಕ್ ಸಿಂಗ್ ಅಲಿಯಾಸ್ ನೇಕಾ ಎಂಬಾತನ ಮೂಲಕ ಭೂಗತ ಜಗತ್ತನ್ನು ಪ್ರವೇಶಿಸಿದ ಎಂದು ವರದಿಯಲ್ಲಿ ಹೇಳಲಾಗಿದೆ. 1980 ಹಾಗೂ 90ರ ದಶಕದಲ್ಲಿ ಖಲಿಸ್ತಾನ್ ಕಮಾಂಡೊ ಫೋರ್ಸ್ ನೊಂದಿಗೆ ನಿಜ್ಜರ್ ಗುರುತಿಸಿಕೊಂಡಿದ್ದ ಹಾಗೂ 2012ರ ನಂತರ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಜಗ್ತಾರ್ ಸಿಂಗ್ ತಾರಾನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದೂ ವರದಿಯಲ್ಲಿ ಹೇಳಲಾಗಿದೆ. ಹಲವಾರು ಭಯೋತ್ಪಾದನಾ ಪ್ರಕರಣಗಳಲ್ಲಿ ನಿಜ್ಜರ್ ಹೆಸರು ಕೇಳಿ ಬಂದ ನಂತರ ಆತ 1996ರಲ್ಲಿ ಕೆನಡಾಗೆ ಪರಾರಿಯಾಗಿದ್ದ ಎಂದು ಹೇಳಲಾಗಿದೆ.
ನಂತರ, ಪಾಕಿಸ್ತಾನ ಮೂಲದ ಖಲಿಸ್ತಾನ್ ಟೈಗರ್ಸ್ ಫೋರ್ಸ್ ಮುಖ್ಯಸ್ಥ ಜಗ್ತಾರ್ ಸಿಂಗ್ ತಾರಾನೊಂದಿಗೆ ನಿಜ್ಜರ್ ಸಂಪರ್ಕ ಸಾಧಿಸಿದ್ದ. ಎಪ್ರಿಲ್ 2012ರಲ್ಲಿ ಬೈಸಾಖಿ ಜಾತಾ ಸದಸ್ಯರೊಂದಿಗೆ ಪಾಕಿಸ್ತಾನಕ್ಕೂ ಭೇಟಿ ನೀಡಿದ್ದ ಹಾಗೂ 15 ದಿನದ ಮಟ್ಟಿಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳ ತರಬೇತಿ ಪಡೆದಿದ್ದ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ಪಾಕಿಸ್ತಾನದಿಂದ ಕೆನಡಾಗೆ ಮರಳಿದ ನಂತರ, ನಿಜ್ಜರ್ ಉಗ್ರಗಾಮಿ ಚಟುವಟಿಕೆಗಳಿಗಾಗಿ ಕೆನಡಾದಲ್ಲಿ ಮಾದಕ ದ್ರವ್ಯ ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ಸಹವರ್ತಿಗಳೊಂದಿಗೆ ನಿಧಿ ಸಂಗ್ರಹದಲ್ಲಿ ತೊಡಗಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹರ್ಪ್ರೀತ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿದ್ದು, ಉಭಯ ದೇಶಗಳೂ ರಾಜತಾಂತ್ರಿಕರನ್ನು ಉಚ್ಚಾಟಿಸಿವೆ. ಕೆನಡಾ ಪ್ರಜೆಗಳಿಗೆ ವೀಸಾ ಸೇವೆಯನ್ನು ಅಮಾನತುಗೊಳಿಸಿರುವ ಭಾರತ, ಈ ಕ್ರಮಕ್ಕೆ ಭದ್ರತಾ ಬೆದರಿಕೆ ಕಾರಣಗಳನ್ನು ಕೆನಡಾದಲ್ಲಿರುವ ಹೈಕಮಿಷನ್ ಹಾಗೂ ರಾಯಭಾರ ಕಚೇರಿಗಳಿಗೆ ನೀಡಿದೆ.