ಲಾಡ್ಕಿ ಬಹಿನ್ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ 5 ಲಕ್ಷ ಇಳಿಕೆ!
Photo credit : indianexpress.com
ಮುಂಬೈ: ವಿವಿಧ ಕಾರಣಗಳಿಂದ 5 ಲಕ್ಷ ಮಂದಿ ಫಲಾನುಭವಿಗಳು ಅನರ್ಹರೆಂದು ಕಂಡು ಬಂದಿದ್ದರಿಂದ, ಡಿಸೆಂಬರ್ 2024ರಲ್ಲಿ 2.46 ಕೋಟಿಯಷ್ಟಿದ್ದ ಲಾಡ್ಕಿ ಬಹಿನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಳೆದ ತಿಂಗಳು 2.41 ಕೋಟಿಗೆ ಇಳಿಕೆಯಾಗಿದೆ ಎಂದು ರವಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮಝಿ ಲಾಡ್ಕಿ ಬಹಿನ್ ಯೋಜನೆ ಮಹಾರಾಷ್ಟ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಕಳೆದ ವರ್ಷದ ಜುಲೈನಿಂದ ಡಿಸೆಂಬರ್ ನಡುವೆ ಈ ಮಹಿಳೆಯರ ಖಾತೆಗಳಿಗೆ 450 ಕೋಟಿ ರೂ. ಸಂಚಿತ ಮೊತ್ತವನ್ನು ವರ್ಗಾಯಿಸಲಾಗಿದ್ದು, ಈ ಮೊತ್ತವನ್ನು ಹಿಂಪಡೆಯಲಾಗಿಲ್ಲ ಹಾಗೂ ಹಾಗೆ ಮಾಡುವ ಯಾವುದೇ ಉದ್ದೇಶವೂ ಸರಕಾರಕ್ಕಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತತ್ಕಾರೆ ಪುನರುಚ್ಚರಿಸಿದ್ದಾರೆ.
ಈ ಯೋಜನೆಯಡಿ ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬದ 21-65 ವರ್ಷದೊಳಗಿನ ಮಹಿಳೆಯರು ಮಾಸಿಕ 1,500 ರೂ. ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಈ ಯೋಜನೆಯ ಮತ್ತೆರಡು ಅರ್ಹತಾ ಷರತ್ತುಗಳೆಂದರೆ, ಈ ಯೋಜನೆಯ ಫಲಾನುಭವಿ ಕುಟುಂಬಗಳು ಯಾವುದೇ ನಾಲ್ಕು ಚಕ್ರದ ವಾಹನವನ್ನು ಹೊಂದಿರಬಾರದು ಹಾಗೂ ಫಲಾನುಭವಿ ಕುಟುಂಬದ ಯಾವುದೇ ಸದಸ್ಯರು ಸರಕಾರಿ ಸೇವೆಯಲ್ಲಿರಬಾರದು ಎಂದಾಗಿದೆ.
“ಯಾರನ್ನು ಅನರ್ಹರು ಎಂದು ಘೋಷಿಸಲಾಗಿದೆಯೊ, ಅಂಥವರು ಮುಂದೆ ಈ ಪ್ರಯೋಜನವನ್ನು ಸ್ವೀಕರಿಸುವುದಿಲ್ಲ. ಆದರೆ, ಈಗಾಗಲೇ ಜಮೆ ಮಾಡಿರುವ ಹಣವನ್ನು ವಾಪಸ್ ಪಡೆಯುವುದು ಸೂಕ್ತವಾಗುವುದಿಲ್ಲ” ಎಂದು ಅದಿತಿ ತತ್ಕಾರಿ ಹೇಳಿದ್ದಾರೆ.
ಅನರ್ಹರು ಎಂದು ಗುರುತಿಸಲಾಗಿರುವ 5 ಲಕ್ಷ ಮಹಿಳೆಯರ ಪೈಕಿ, 1.5 ಲಕ್ಷ ಮಹಿಳೆಯರು 65 ವರ್ಷ ಮೀರಿರುವುದು ಕಂಡು ಬಂದಿದ್ದರೆ, 1.6 ಲಕ್ಷ ಮಹಿಳೆಯರು ಒಂದೋ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದಾರೆ ಇಲ್ಲವೆ ನಮೋ ಶೇತ್ಕಾರಿ ಯೋಜನೆಯಂತಹ ಇನ್ನಿತರ ಸರಕಾರಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಳಿದ 2.3 ಲಕ್ಷ ಮಹಿಳೆಯರು ಸಂಜಯ್ ಗಾಂಧಿ ನಿರಾಧಾರ್ ಯೋಜನೆಯಡಿ ಪ್ರಯೋಜನವನ್ನು ಸ್ವೀಕರಿಸುತ್ತಿದ್ದು, ಅಂಥವರು ಲಾಡ್ಕಿ ಬಹಿನ್ ಯೋಜನೆಯಡಿ ಅನರ್ಹಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂಬ ಗುರಿಯೊಂದಿಗೆ ಕಳೆದ ವರ್ಷದ ಜುಲೈ ತಿಂಗಳಲ್ಲಿ ಜಾರಿಯಾಗಿದ್ದ ಲಾಡ್ಕಿ ಬಹಿನ್ ಯೋಜನೆಯು ನವೆಂಬರ್ ತಿಂಗಳಲ್ಲಿ ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಸರಕಾರವು ಭಾರಿ ಬಹುಮತ ಗಳಿಸಲು ಪ್ರಮುಖ ಕಾರಣಗಳಲ್ಲೊಂದು ಎಂದು ಹೇಳಲಾಗಿದೆ. 288 ಮಂದಿ ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ, ಶಿವಸೇನೆ ಹಾಗೂ ಎನ್ಸಿಪಿಯನ್ನು ಒಳಗೊಂಡಿದ್ದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು 230 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.
ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ತಾವೇನಾದರೂ ಅಧಿಕಾರಕ್ಕೆ ಮರಳಿ ಬಂದರೆ, ಈ ಯೋಜನೆಯಡಿ ಒದಗಿಸಲಾಗುತ್ತಿರುವ ಆರ್ಥಿಕ ನೆರವನ್ನು 1,500 ರೂ.ನಿಂದ 2,100 ರೂ.ಗೆ ಹೆಚ್ಚಿಸಲಾಗುವುದು ಎಂದು ಮಹಾಯುತಿ ನಾಯಕರು ಆಶ್ವಾಸನೆ ನೀಡಿದ್ದರು. ಆದರೆ, ರಾಜ್ಯದ ವಿತ್ತೀಯ ಕೊರತೆಯು 2 ಲಕ್ಷ ಕೋಟಿ ರೂ. ತಲುಪಿರುವಾಗ ಈ ಯೋಜನೆಯ ಹಣಕಾಸು ಸಾಧಕ-ಬಾಧಕದ ಕುರಿತು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು.