ಏರ್ ಇಂಡಿಯಾ ವಿಮಾನದ ಪಥ ಬದಲಾವಣೆ; ಐವರು ಸಂಸದರಿಂದ ಲೋಕಸಭಾ ಸ್ಪೀಕರ್ ಗೆ ಪತ್ರ
PC : PTI
ಹೊಸದಿಲ್ಲಿ, ಆ. 12: ತಾವು ಪ್ರಯಾಣಿಸುತ್ತಿದ್ದ ತಿರುವನಂತಪುರ-ದಿಲ್ಲಿ ವಿಮಾನದ ಪಥವನ್ನು ಚೆನ್ನೈಗೆ ಬದಲಾಯಿಸಿರುವ ಘಟನೆ ಕುರಿತಂತೆ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಐವರು ಸಂಸದರು ಲೋಕಸಭಾ ಸ್ಪೀಕರ್ ಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಏರ್ ಇಂಡಿಯಾದ ಹಕ್ಕು ಚ್ಯುತಿ ಆರೋಪಕ್ಕೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸಂಸದರಾದ ಕೆ.ಸಿ. ವೇಣುಗೋಪಾಲ್, ಕೆ. ಸುರೇಶ್, ಅಡೂರ್ ಪ್ರಕಾಶ್, ರೋಬರ್ಟ್ ಬ್ರೂಸ್ ಹಾಗೂ ಸಿಪಿಐ (ಎಂ)ನ ಕೆ. ರಾಧಾಕೃಷ್ಣನ್ ಅವರು ನಾಗರಿಕ ವಿಮಾನ ಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಕೂಡ ಪತ್ರವನ್ನು ಬರೆದಿದ್ದಾರೆ ಹಾಗೂ ಘಟನೆ ಕುರಿತು ಕೂಡಲೇ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಐವರು ಸಂಸದರು, ‘‘ಏರ್ ಇಂಡಿಯಾ ವಿಮಾನ ಎಐ 2455 (ತಿರುವನಂತಪುರದಿಂದ ದಿಲ್ಲಿಗೆ)ಯಲ್ಲಿ ಆಗಸ್ಟ್ 10ರಂದ ನಡೆದ ಗಂಭೀರ ಹಕ್ಕು ಚ್ಯುತಿಯ ಕುರಿತು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ’’ ಎಂದು ಹೇಳಿದ್ದಾರೆ.