ಮಧ್ಯಪ್ರದೇಶ: ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿ ಹತ್ಯೆ
ಸಾಂದರ್ಭಿಕ ಚಿತ್ರ
ಭೋಪಾಲ್,ಜು.27: ದೇವಾಲಯದ ಆವರಣದಲ್ಲಿ ಬಾಲಕಿಯನ್ನು ಭೇಟಿಯಾದ 17 ವರ್ಷದ ಬಾಲಕನನ್ನು ಸೆರೆಹಿಡಿದ ಬಾಲಕಿಯ ಕುಟುಂಬಿಕರು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮಗ್ಗಾ ಥಳಿಸಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ನಾಮ್ಲಿ ಪ್ರದೇಶದಲ್ಲಿ ಸಂಭವಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ವ್ಯಕ್ತಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ರತ್ಲಾಮ್ ಜಿಲ್ಲಾ ಪೊಲೀಸ್ ಆಧೀಕ್ಷಕ ಅಮಿತ್ ಕುಮಾರ್ ತಿಳಿಸಿದ್ದಾರೆ. ಮೆಸಾವಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅನ್ಯ ಜಾತಿಯ ಬಾಲಕನೊಬ್ಬ, ಅಪ್ರಾಪ್ತ ಬಾಲಕಿಯ ಜೊತೆ ಪ್ರೇಮಸಂಬಂಧವನ್ನು ಹೊಂದಿದ್ದನೆನ್ನಲಾಗಿದೆ. ದೇವಾಲಯದ ಆವರಣದಲ್ಲಿ ತನ್ನನ್ನು ಭೇಟಿಯಾಗುವಂತೆ ಆತ ಬಾಲಕಿಗೆ ಕರೆ ಮಾಡಿದ್ದ. ಆದರೆ ರಾತ್ರಿ 11ರ ವೇಳೆಗೆ ಆತನನ್ನು ಆಕೆಯ ಪಾಲಕರು ಹಿಡಿದು ಆತನ ತಲೆಕೂದಲು ಬೋಳಿಸಿ, ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದರು. ಗಂಭೀರ ಗಾಯಗೊಡ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ
‘‘ಘಟನೆಯ ಬಗ್ಗೆ ಶನಿವಾರ ಬೆಳಗ್ಗೆಯಷ್ಟೇ ತನಗೆ ತಿಳಿದುಬಂದಿದ್ದಾಗಿ ಮೃತನ ಸಹೋದರ ತಿಳಿಸಿದ್ದಾರೆ. ಪಕ್ಕದ ಗ್ರಾಮದ ನಿವಾಸಿಯಾದ ತಮಗೆ ಶನಿವಾರ ಬೆಳಗ್ಗೆಯಷ್ಟೇ ಸುದ್ದಿ ತಿಳಿದುಬಂದಿದ್ದು, ಸ್ಶಳಕ್ಕೆ ಆಗಮಿಸಿದಾಗ ಸಹೋದರ ದೇವಾಲಯದ ಸಮೀಪದ ಮನೆಯೊಂದರ ಸಮೀಪ ಸತ್ತು ಬಿದ್ದಿರುವುದು ಕಂಡುಬಂತು. ಆತನನ್ನು ಮೊದಲಿಗೆ ಮರಕ್ಕೆ ಬಿಗಿದು,ತಲೆಯನ್ನು ಬೋಳಿಸಲಾಯಿತು. ಆನಂತರ ಆತನನ್ನು ಹಿಗ್ಗಾಮಗ್ಗಾ ಥಳಿಸಿ ಕೊಲ್ಲಲಾಗಿದೆ. ಆತನ ದೇಹದ ಮೇಲೆ ಆಳವಾದ ಗಾಯದ ಗುರುತುಗಳು ಕಂಡುಂದಿವೆ’’ ಎಂದು ಅವರು ಹೇಳಿದ್ದಾರೆ.
ಮೃತ ಬಾಲಕ ಹಾಗೂ ಹುಡುಗಿ ಹಿಂದೆ ಸಹಪಾಠಿಗಳಾಗಿದ್ದರು.ಬೇರೆ ಬೇರೆ ಜಾತಿಗಳಿಗೆ ಸೇರಿದ ಅವರ ನಡುವಿನ ಗಾಢವಾದ ಸ್ನೇಹವು ಪ್ರೇಮ ಸಂಬಂಧವಾಗಿ ಮಾರ್ಪಾಡಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.