ಮಧ್ಯಪ್ರದೇಶ | ಇಲಿ ಕಚ್ಚಿ 2 ನವಜಾತ ಶಿಶುಗಳು ಮೃತ್ಯು : ಸ್ಥಿತಿ-ಗತಿ ವರದಿ ಸಲ್ಲಿಸುವಂತೆ ಹೈಕೋಟ್ ಸೂಚನೆ
PC : PTI
ಭೋಪಾಲ್ ಸೆ.12: ಇಂದೋರ್‌ನ ಸರಕಾರಿ ಆಸ್ಪತ್ರೆಯಲ್ಲಿ ಇಲಿಗಳಿಂದ ಕಡಿತಕ್ಕೊಳಗಾಗಿ ಎರಡು ಶಿಶುಗಳು ಮೃತಪಟ್ಟ ಕುರಿತಂತೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಬುಧವಾರ ರಾಜ್ಯದ ಅಧಿಕಾರಿಗಳಿಂದ ಸ್ಥಿತಿಗತಿ ವರದಿ ಕೋರಿದೆ.
ನ್ಯಾಯಮೂರ್ತಿಗಳಾದ ವಿವೇಕ್ ರಸಿಯಾ ಹಾಗೂ ಜೆ.ಕೆ.ಪಿಳ್ಳೆ ಅವರ ಪೀಠ ಈ ಘಟನೆ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ ಹಾಗೂ ಅಧಿಕಾರಿಗಳಿಗೆ ನೋಟಿಸು ಜಾರಿ ಮಾಡಿದೆ. ಐದು ದಿನಗಳ ಒಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಹಾಗೂ ಕ್ರಮ ಕೈಗೊಳ್ಳಲಾದ ವ್ಯಕ್ತಿಗಳ ಪಟ್ಟಿ ನೀಡುವಂತೆ ಅದು ಕೋರಿದೆ.
ಮಹಾರಾಜ ಯಶ್ವಂತ್‌ರಾವ್ ಆಸ್ಪತ್ರೆಯ ಆಡಳಿತದ ದಿವ್ಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೀಠ ಹೇಳಿದೆ.
ಮಹಾರಾಜ ಯಶ್ವಂತರಾವ್ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಆಗಸ್ಟ್ 31 ಹಾಗೂ ಸೆಪ್ಟಂಬರ್ 1ರ ನಡುವೆ ಶಿಶುಗಳಿಗೆ ಇಲಿ ಕಚ್ಚಿದೆ ಎಂದು ಮಹಾತ್ಮಾ ಗಾಂಧಿ ಸ್ಮಾರಕ ಸರಕಾರಿ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಅಶೋಕ್ ಯಾದವ್ ಅವರು ಸಲ್ಲಿಸಿದ ವರದಿ ಹೇಳಿದೆ. ಮಹಾರಾಜ ಯಶ್ವಂತ್‌ರಾವ್ ಆಸ್ಪತ್ರೆ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನೊಂದಿಗೆ ನಂಟು ಹೊಂದಿದೆ.
ಈ ಘಟನೆ ನಡೆಯುವುದಕ್ಕೆ ಕೆಲವು ದಿನಗಳ ಮೊದಲು ದಾದಿಯರು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇಲಿಗಳನ್ನು ಗಮನಿಸಿದ್ದಾರೆ. ಆದರೆ, ಅವರು ಈ ಬಗ್ಗೆ ಮಾಹಿತಿ ನೀಡಲು ವಿಫಲರಾಗಿದ್ದಾರೆ. ಆದುದರಿಂದ ಯಾವುದೇ ರೀತಿಯ ತಪಾಸಣೆ ನಡೆಸಲಿಲ್ಲ ಎಂದು ಕೂಡ ವರದಿ ಹೇಳಿದೆ.
ಇಲಿಗಳು ಒಂದು ಶಿಶುವಿನ ಕೈ ಬೆರಳುಗಳಿಗೆ ಕಚ್ಚಿದೆ, ಇನ್ನೊಂದು ಶಿಶುವಿನ ತಲೆ ಹಾಗೂ ಭುಜಕ್ಕೆ ಕಚ್ಚಿದೆ. ಮೊದಲ ಶಿಶು ಸೆಪ್ಟಂಬರ್ 2ರಂದು ಮೃತಪಟ್ಟಿತ್ತು. ಈ ಶಿಶುವಿನ ಸಾವಿಗೆ ನ್ಯುಮೋನಿಯಾ ಕಾರಣ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದರು.