×
Ad

ಮಲ್ಲಿಗೆ ಕೊಂಡೊಯ್ದ ಮಲಯಾಳಿ ನಟಿ ನವ್ಯಾ ನಾಯರ್‌ಗೆ ಆಸ್ಟ್ರೇಲಿಯಾದಲ್ಲಿ 1.14 ಲಕ್ಷ ರೂ. ದಂಡ!

Update: 2025-09-08 12:48 IST

Photo: Instagram/@Navyanair143

ಹೊಸದಿಲ್ಲಿ: ಮಲ್ಲಿಗೆ ಹೂವು ಕೊಂಡೊಯ್ದಿದ್ದಕ್ಕಾಗಿ ಮಲಯಾಳಿ ನಟಿ ನವ್ಯಾ ನಾಯರ್‌ಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ 1.14 ಲಕ್ಷ ರೂ. ದಂಡ ವಿಧಿಸಲಾಗಿದೆ.

ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಮಲಯಾಳಿ ಅಸೋಸಿಯೇಷನ್ ಓಣಂ ಕಾರ್ಯಕ್ರಮ ಆಯೋಜಿಸಿತ್ತು. ನಟಿ ನವ್ಯಾ ನಾಯರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. 15 ಸೆಂಟಿಮೀಟರ್ ಉದ್ದದ ಮಲ್ಲಿಗೆ ಹೂವಿಗೆ 1,980 ಡಾಲರ್ ಅಂದರೆ ಸುಮಾರು ರೂ. 1.14 ಲಕ್ಷ ರೂಪಾಯಿ ದಂಡ ಪಾವತಿಸಿದ್ದೇನೆ ಎಂದು ಸ್ವತಃ ನವ್ಯಾ ನಾಯರ್ ಹೇಳಿಕೊಂಡಿದ್ದಾರೆ.

“ನಾನು ಇಲ್ಲಿಗೆ ಬರುವ ಮೊದಲು ನನ್ನ ತಂದೆ ನನಗಾಗಿ ಮಲ್ಲಿಗೆಯನ್ನು ಖರೀದಿಸಿದ್ದರು. ಅವರು ಅದನ್ನು ಎರಡು ಭಾಗಗಳಾಗಿ ಕತ್ತರಿಸಿ ನನಗೆ ಕೊಟ್ಟರು. ಕೊಚ್ಚಿಯಿಂದ ಸಿಂಗಾಪುರಕ್ಕೆ ಪ್ರಯಾಣಿಸುವ ವೇಳೆ ನನ್ನ ಕೂದಲಿನಲ್ಲಿ ಒಂದನ್ನು ಧರಿಸಲು ಹೇಳಿದರು. ಏಕೆಂದರೆ ನಾನು ತಲುಪುವ ಹೊತ್ತಿಗೆ ಅದು ಒಣಗುತ್ತದೆ. ನಂತರ ಸಿಂಗಾಪುರದಿಂದ ಮುಂದಿನ ಪ್ರಯಾಣದಲ್ಲಿ ನಾನು ಧರಿಸಲು ಸಾಧ್ಯವಾಗುವಂತೆ ಎರಡನೆಯದನ್ನು ನನ್ನ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಲು ನನಗೆ ಹೇಳಿದರು. ನಾನು ಅದನ್ನು ನನ್ನ ಕ್ಯಾರಿ ಬ್ಯಾಗ್‌ನಲ್ಲಿ ಇರಿಸಿಕೊಂಡೆ. ಆದರೆ, ಅದು ಕಾನೂನುಬಾಹಿರ ಎಂದು ನನಗೆ ತಿಳಿದಿರಲಿಲ್ಲ. 15 ಸೆಂಟಿಮೀಟರ್ ಮಲ್ಲಿಗೆಯನ್ನು ತಂದಿದ್ದಕ್ಕಾಗಿ ಅಧಿಕಾರಿಗಳು ನನಗೆ ದಂಡವನ್ನು ಪಾವತಿಸುವಂತೆ ಸೂಚಿಸಿದರು” ಎಂದು ನವ್ಯಾ ಹೇಳಿದರು.

ಪ್ರಪಂಚದ ಕೆಲವೆಡೆ ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಮಲ್ಲಿಗೆಯನ್ನು ಕೊಂಡೊಯ್ಯಲು ಅನುಮತಿ ಇಲ್ಲ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News