×
Ad

ಮಾಲೆಗಾಂವ್ ಸ್ಫೋಟ ಪ್ರಕರಣ | ಆರೆಸ್ಸೆಸ್ ಮುಖ್ಯಸ್ಥರನ್ನು ಬಂಧಿಸುವಂತೆ ನಮಗೆ ಆದೇಶಿಸಲಾಗಿತ್ತು:ತನಿಖಾಧಿಕಾರಿ ಸ್ಫೋಟಕ ಹೇಳಿಕೆ

Update: 2025-08-01 21:15 IST

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ | PTI

ಹೊಸದಿಲ್ಲಿ,ಆ.1: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಏಳು ಆರೋಪಿಗಳ ಖುಲಾಸೆಯ ಬೆನ್ನಲ್ಲೇ ಪ್ರಕರಣದ ಮಾಜಿ ತನಿಖಾಧಿಕಾರಿಯೋರ್ವರು ತನಿಖೆಯ ಸಂದರ್ಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಬಂಧಿಸುವಂತೆ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ಕ್ಕೆ ಆದೇಶಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಸ್ಫೋಟ ಪ್ರಕರಣದ ತನಿಖೆಯನ್ನು ನಡೆಸಿದ್ದ ಎಟಿಎಸ್ ತಂಡದ ಭಾಗವಾಗಿದ್ದ ಮೆಹಬೂಬ್ ಮುಜಾವರ್ ಅವರು, ತನಿಖೆಯನ್ನು ತಪ್ಪುದಾರಿಗೆಳೆಯುವ ಪ್ರಯತ್ನವು ನಡೆದಿತ್ತು ಮತ್ತು ಆ ಹುನ್ನಾರಕ್ಕೆ ತಾನು ಆಕ್ಷೇಪವನ್ನು ವ್ಯಕ್ತಪಡಿಸಿದ್ದಕ್ಕಾಗಿ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದೂ ಹೇಳಿದ್ದಾರೆ.

ಯಾವುದೇ ‘ವಿಶ್ವಾಸಾರ್ಹ ಮತ್ತು ಬಲವಾದ’ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣದಿಂದ ಮುಂಬೈನ ವಿಶೇಷ ನ್ಯಾಯಾಲಯವು ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಪ್ರಕರಣದ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ ಮರುದಿನ ಮಾಜಿ ಎಟಿಎಸ್ ಅಧಿಕಾರಿಯ ಹೇಳಿಕೆಗಳು ಹೊರಬಿದ್ದಿವೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮುಜಾವರ್, ಆಗ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಖ್ಯ ತನಿಖಾಧಿಕಾರಿಯಾಗಿದ್ದ ಪರಮಬೀರ್ ಸಿಂಗ್ ಅವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್‌ ಭಾಗವತ್‌ರನ್ನು ಬಂಧಿಸುವಂತೆ ತನಗೆ ಆದೇಶಿಸಿದ್ದರು. ಪ್ರಕರಣವನ್ನು ಕೇಸರಿ ಭಯೋತ್ಪಾದನೆ ಪ್ರಕರಣವನ್ನಾಗಿ ಬಿಂಬಿಸಲು ಭಾಗವತ್‌ ಅವರನ್ನು ಆರೋಪಿಯನ್ನಾಗಿ ಸೇರಿಸಲು ಉದ್ದೇಶಿಸಲಾಗಿತ್ತು ಎಂದು ತಿಳಿಸಿದರು.

ಬಲಪಂಥೀಯ ನಾಯಕರ ಮಾನಹಾನಿ ಮತ್ತು ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಹಾಗೂ ಹಿಂದು ಸಮುದಾಯವನ್ನು ಗುರಿಯಾಗಿಸಿಕೊಳ್ಳುವ ಉದ್ದೇಶದೊಂದಿಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ಹಿಂದೆ ಆರೋಪಿಸಿತ್ತು.

‘ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನಕಲಿ ತನಿಖೆಯನ್ನು ನಡೆಸಲು ಪ್ರಯತ್ನಿಸಲಾಗಿತ್ತು, ಆದರೆ ನಾನು ಅದಕ್ಕೆ ಸಿದ್ಧನಿರಲಿಲ್ಲ. ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು, ಆದರೆ ನಾನು ನಂತರ ದೋಷಮುಕ್ತಗೊಂಡಿದ್ದೆ’ ಎಂದು ಮುಜಾವರ್ ಹೇಳಿದರು.

ರಾಜ್ಯದಲ್ಲಿಯ ಅಂದಿನ ಕಾಂಗ್ರೆಸ್ ಸರಕಾರವು ಪ್ರಕರಣದಲ್ಲಿಯ ಆಗಿನ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರಿರಬೇಕು ಎಂದು ಹೇಳಿದ ಅವರು,‘ಪ್ರಕರಣದಲ್ಲಿಯ ಗೌಪ್ಯ ಮಾಹಿತಿಗಳ ಬಗ್ಗೆ ನನಗೆ ತಿಳಿದಿತ್ತು. ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೆ. ಇವೆಲ್ಲ ಸುಳ್ಳು ಎನ್ನುವುದು ನನಗೆ ಗೊತ್ತಿತ್ತು ಮತ್ತು ಅದೇ ಕಾರಣದಿಂದ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು’ ಎಂದೂ ಅವರು ಹೇಳಿದರು.

ಆಗಿನ ರಾಜ್ಯ ಸರಕಾರವು ಮುಜಾವರ್‌ರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.

ಮುಜಾವರ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, 2008ರ ಸಂಚು ಬಹಿರಂಗಗೊಂಡಿದೆ. ಆಗಿನ ಸರಕಾರವು ಹಿಂದು ಭಯೋತ್ಪಾದನೆ ಮತ್ತು ಕೇಸರಿ ಭಯೋತ್ಪಾದನೆಯಂತಹ ಪದಗಳನ್ನು ಸೃಷ್ಟಿಸಿತ್ತು. ಇಸ್ಲಾಮಿಕ್ ಭಯೋತ್ಪಾದನೆಯ ಕುರಿತು ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಸರಕಾರಕ್ಕೆ ಮತಗಳನ್ನು ನೀಡಿದವರನ್ನು ಸಿಟ್ಟಿಗೆಬ್ಬಿಸಲು ಸಾಧ್ಯವಿರಲಿಲ್ಲ. ಅದಕ್ಕಾಗಿಯೇ ಹಿಂದು ಭಯೋತ್ಪಾದನೆ ಸಿದ್ಧಾಂತವನ್ನು ಸೃಷ್ಟಿಸಲಾಗಿತ್ತು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News