ಮಾಲೆಗಾಂವ್ ಸ್ಫೋಟ ಪ್ರಕರಣ| ಪ್ರಮುಖ ದಾಖಲೆಗಳು, ಮೂಲಹೇಳಿಕೆಗಳು ನಾಪತ್ತೆ; ವರದಿ
File Photo : PTI
ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿರುವ ವಿಶೇಷ ಎನ್ಐಎ ನ್ಯಾಯಾಲಯವು ಪ್ರಾಸಿಕ್ಯೂಷನ್ ನಿರ್ಣಾಯಕ ಸಾಕ್ಷ್ಯಗಳನ್ನು ನಿರ್ವಹಿಸಿದ್ದ ರೀತಿಯನ್ನು,ವಿಶೇಷವಾಗಿ ಪ್ರಮುಖ ದಾಖಲೆಗಳು ನಿಗೂಢವಾಗಿ ಕಣ್ಮರೆಯಾಗಿರುವುದನ್ನು ಕೂಲಂಕಶವಾಗಿ ಪರಿಶೀಲಿಸಿದೆ ಎಂದು Times of India ವರದಿ ಮಾಡಿದೆ.
ಸಿಆರ್‌ಪಿಸಿಯ ಕಲಂ 164ರಡಿ ದಾಖಲಿಸಿಕೊಳ್ಳಲಾಗಿದ್ದ ಪ್ರಮುಖ ಸಾಕ್ಷಿಗಳ ಮೂಲ ಹೇಳಿಕೆಗಳನ್ನು ಪ್ರಸ್ತುತ ಪಡಿಸುವಲ್ಲಿ ಪ್ರಾಸಿಕ್ಯೂಷನ್ ವೈಫಲ್ಯ ಮತ್ತು ನಂತರ ದ್ವಿತೀಯ ಸಾಕ್ಷ್ಯವನ್ನು ಸಲ್ಲಿಸುವ ಪ್ರಯತ್ನಗಳ ತಪ್ಪು ನಿರ್ವಹಣೆಯನ್ನು ನ್ಯಾಯಾಲಯದ ತಾರ್ಕಿಕತೆಯು ಕೇಂದ್ರೀಕರಿಸಿದೆ.
ನಂತರ ಎಟಿಎಸ್ ತಮ್ಮನ್ನು ಬಲವಂತಗೊಳಿಸಿತ್ತು ಎಂದು ಆರೋಪಿಸಿ ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ಇಬ್ಬರು ಸೇರಿದಂತೆ ಸಾಕ್ಷಿಗಳು ಒಳಸಂಚಿನ ಸಭೆಯೊಂದಿಗೆ ಸಂಬಂಧವನ್ನು ಹೊಂದಿದ್ದರು. ಮುಸ್ಲಿಮರ ವಿರುದ್ಧ ಪ್ರತೀಕಾರ, ವಿಶಿಷ್ಟವಾಧ ಭಗವಾ ಧ್ವಜದೊಂದಿಗೆ ‘ಹಿಂದು ರಾಷ್ಟ್ರ’ಕ್ಕಾಗಿ ಪ್ರತ್ಯೇಕ ಸಂವಿಧಾನ, ಕೇಂದ್ರ ಹಿಂದು ಸರಕಾರ(ಆರ್ಯಾವರ್ತ)ದ ರಚನೆ ಹಾಗೂ ಇಸ್ರೇಲ್ ಮತ್ತು ಥೈಲ್ಯಾಂಡ್ ಗಳಲ್ಲಿ ದೇಶಭ್ರಷ್ಟ ಸರಕಾರದ ಪರಿಕಲ್ಪನೆ ಇವುಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದಿದ್ದವು. ಒಟ್ಟು 39 ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ದಾಖಲಾದ ಹೇಳಿಕೆಗಳು ಸಾಕ್ಷ್ಯಗಳಾಗಿ ಅಂಗೀಕಾರಾರ್ಹವಾಗಿದ್ದು, ಅಪರಾಧವನ್ನು ದೃಢೀಕರಿಸುವ ಮೌಲ್ಯವನ್ನು ಹೊಂದಿರುತ್ತವೆ ಮತ್ತು ಈ ಹೇಳಿಕೆಗಳು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಪ್ರಕರಣಕ್ಕೆ ನೆರವಾಗುತ್ತಿದ್ದವು. ಎಟಿಎಸ್ನ ಅರಂಭಿಕ ತನಿಖೆ ಸಂದರ್ಭದಲ್ಲಿ 13 ಸಾಕ್ಷಿಗಳ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ದಾಖಲಿಸಿಕೊಂಡಿದ್ದರು. ಸಾಕ್ಷ್ಯಗಳು ಒಳಸಂಚು ಸಭೆಯಲ್ಲಿ ಆರೋಪಿಗಳ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ್ದವು.
ಎಪ್ರಿಲ್, 2016ರಲ್ಲಿ ಈ ನಿರ್ಣಾಯಕ ದಾಖಲೆಗಳು ನ್ಯಾಯಾಲಯದ ಕಡತಗಳಿಂದ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ತೀವ್ರ ಹುಡುಕಾಟದ ಬಳಿಕವೂ ದಾಖಲೆಗಳು ಪತ್ತೆಯಾಗಿರಲಿಲ್ಲ. ನವಂಬರ್ 2016ರಲ್ಲಿ ಎಟಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಕಾಣೆಯಾದ ಕೆಲವು ಹೇಳಿಕೆಗಳ ಮೂರು ಪ್ರಮಾಣೀಕೃತ ಛಾಯಾಪ್ರತಿಗಳು ತನ್ನ ಬಳಿಯಿದ್ದು, ಅವುಗಳನ್ನು ದ್ವಿತೀಯ ಸಾಕ್ಷ್ಯವನ್ನಾಗಿ ಬಳಸಲು ಅನುಮತಿ ಕೋರಿತ್ತು. ಇದನ್ನು ಆರೋಪಿಗಳು ವಿರೋಧಿಸಿದ್ದರು.
ಜ.2,2017ರಂದು ವಿಶೇಷ ಎನ್ಐಎ ನ್ಯಾಯಾಲಯವು ಈ ಪ್ರತಿಗಳನ್ನು ದ್ವಿತೀಯ ಸಾಕ್ಷ್ಯವನ್ನಾಗಿ ಬಳಸಲು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿತ್ತು. ಆದರೆ ಈಗ ಖುಲಾಸೆಗೊಂಡಿರುವ ಆರೋಪಿಗಳ ಪೈಕಿ ಓರ್ವರಾಗಿರುವ ಸಮೀರ್ ಕುಲಕರ್ಣಿ ಇದನ್ನು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
2019ರಲ್ಲಿ, ಪ್ರಾಸಿಕ್ಯೂಷನ್ ಸಲ್ಲಿಸಿದ ಪ್ರತಿಗಳು ಮೂಲ ಹೇಳಿಕೆಗಳದ್ದೇ ಎನ್ನುವುದನ್ನು ಸಾಬೀತುಗೊಳಿಸುವ ಯಾವುದೇ ಪುರಾವೆಯಿಲ್ಲ ಎನ್ನುವುದನ್ನು ಗಮನಿಸಿದ್ದ ಉಚ್ಚ ನ್ಯಾಯಾಲಯವು ವಿಶೇಷ ನ್ಯಾಯಾಲಯದ ಆದೇಶವನ್ನು ತಡೆಹಿಡಿದಿತ್ತು. ಹೊಸ ಅರ್ಜಿಯನ್ನು ಸಲ್ಲಿಸುವಂತೆ ಮತ್ತು ಪ್ರತಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಚಾರಣೆಯನ್ನು ನಡೆಸುವಂತೆ ಅದು ಪ್ರಾಸಿಕ್ಯೂಷನ್ಗೆ ಸೂಚಿಸಿತ್ತು.
ಉಚ್ಚ ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಹೊಸ ಅರ್ಜಿಯನ್ನು ಸಲ್ಲಿಸಲು ಮತ್ತು ಅಗತ್ಯ ವಿಚಾರಣೆಯನ್ನು ನಡೆಸಲು ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ಎನ್ಐಎ ನ್ಯಾಯಾಲಯ ಹೇಳಿದೆ. ಬದಲಿಗೆ ವಿಚಾರಣೆಯನ್ನು ಮುಂದುವರಿಸಿದ್ದ ಪ್ರಾಸಿಕ್ಯೂಷನ್ ಸಿಆರ್‌ಪಿಸಿಯ ಕಲಂ 164ರಡಿ ಹೇಳಿಕೆಗಳು ದಾಖಲಾಗಿದ್ದವೇ ಎಂದು ಸಾಕ್ಷಿಗಳನ್ನು ಪ್ರಶ್ನಿಸಿದ್ದು,ಇದಕ್ಕೆ ಅವರು ಧನಾತ್ಮಕವಾಗಿ ಉತ್ತರಿಸಿದ್ದರು. ಆದರೆ ಇದು ಸಾಲದು ಎಂದು ನ್ಯಾಯಾಲಯವು ಕಂಡುಕೊಂಡಿತ್ತು.