ಸೂರತ್ | ಇಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಲೆ ಮಾಡಿ ದೈಹಿಕ ಶಿಕ್ಷಕ ಆತ್ಮಹತ್ಯೆ
Photo | NDTV
ಸೂರತ್ : ದಿಂಡೋಲಿ ಪಟ್ಟಣದಲ್ಲಿ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ದೈಹಿಕ ಶಿಕ್ಷಕನೋರ್ವ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷ ಉಣಿಸಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಪೇಶ್ ಸೋಲಂಕಿ(41) ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ದೈಹಿಕ ಶಿಕ್ಷಕ. ಪ್ರಕರಣಕ್ಕೆ ಸಂಬಂಧಿಸಿ ಉಮ್ರಾ ಪೊಲೀಸರು ಸೋಲಂಕಿಯ ಪತ್ನಿ ಫಲ್ಗುಣಿ ಮತ್ತು ಆಕೆಯ ಪ್ರಿಯಕರ ನರೇಶ್ ರಾಥೋಡ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಿದ್ದಾರೆ.
ರಾಥೋಡ್ ಮತ್ತು ಫಲ್ಗುಣಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರು ನಾಲ್ಕು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದರು. ಇದೇ ವಿಷಯಕ್ಕೆ ಪತಿ ಮತ್ತು ಪತ್ನಿ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಮೊದಲು ಅಲ್ಪೇಶ್ ಸೋಲಂಕಿ ಎಂಟು ಪುಟಗಳ ಡೆತ್‌ನೋಟ್ ಬರೆದಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ, ಅವರು ಕೃಷಿ ವಿಸ್ತರಣಾಧಿಕಾರಿ ನರೇಶ್ ರಾಥೋಡ್ ಅವರೊಂದಿಗಿನ ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.