ವಿಧಾನಸಭೆ ಅಧಿವೇಶನ ಕರೆಯದೆ ಮಣಿಪುರ ರಾಜ್ಯಪಾಲರಿಂದ ಸಂವಿಧಾನದ ಉಲ್ಲಂಘನೆ: ಕಾಂಗ್ರೆಸ್ ಪ್ರತಿಪಾದನೆ
PC : PTI
ಇಂಫಾಲ: ಬಿಜೆಪಿ ನೂತನ ಮುಖ್ಯಮಂತ್ರಿಯನ್ನು ನೇಮಕ ಮಾಡದೇ ಇರುವುದರಿಂದ ಅಧಿವೇಶವನ್ನು ಶೂನ್ಯ ಎಂದು ಘೋಷಿಸಲಾಯಿತು ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿದೆ.
ವಿಧಾನ ಸಭೆ ಅಧಿವೇಶನ ಕರೆಯದೆ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಅದು ಮಂಗಳವಾರ ಆರೋಪಿಸಿದೆ.
‘‘ಇಂದು (ಫೆಬ್ರವರಿ 11) ಮಣಿಪುರ ವಿಧಾನ ಸಭೆಯ ಸಾಂವಿಧಾನಿಕ ಮಾನ್ಯತೆಯ ಅಧಿವೇಶನದ ಕೊನೆಯ ದಿನವಾಗಿದೆ’’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಂವಿಧಾನದ ವಿಧಿ 174 (1)ನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ವಿಧಾನ ಸಭೆಯ ಎರಡು ಅಧಿವೇಶನಗಳ ನಡುವೆ 6 ತಿಂಗಳಿಗಿಂತ ಹೆಚ್ಚಿನ ಅಂತರ ಇರಬಾರದು ಎಂದು ಈ ವಿಧಿ ನಿಗಡಿಪಡಿಸಿದೆ. ಮಣಿಪುರದ ರಾಜ್ಯಪಾಲರು ಈ ವಿಧಿ 174 (1)ಯನ್ನು ಯಾಕೆ ಉಲ್ಲಂಘಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ವಿಧಾನ ಸಭೆಯ ಚಳಿಗಾಲದ ಅಧಿವೇಶನಕ್ಕೆ ಜನವರಿ 24ರಂದು ನೀಡಿದ್ದ ಆದೇಶವನ್ನು ಭಲ್ಲಾ ಅವರು ರವಿವಾರ ಹಿಂಪಡೆದುಕೊಂಡಿದ್ದಾರೆ. ಈ ಅಧಿವೇಶನ ಸೋಮವಾರ ಆರಂಭವಾಗಬೇಕಿತ್ತು.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ವಿರುದ್ಧ ಸೋಮವಾರ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಬಿರೇನ್ ಸಿಂಗ್ ರಾಜೀನಾಮೆ ನೀಡುವಂತೆ ರವಿವಾರ ರಾತ್ರಿ ಬಲವಂತಪಡಿಸಿತ್ತು. ಅನಂತರ ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ್ದರು. ಆದರೆ, ಅವರ ಉತ್ತರಾಧಿಕಾರಿಯನ್ನು ಬಿಜೆಪಿ ಇದುವರೆಗೆ ನೇಮಿಸಿಲ್ಲ. ಆದುದರಿಂದ ವಿಧಾನ ಸಭೆ ಅಧಿವೇಶವನ್ನು ಶೂನ್ಯ ಎಂದು ಘೋಷಿಸಲಾಗಿದೆ ಎಂದು ಜೈರಾಮ್ ರಮೇಶ್ ಹೇಳಿದರು.