ಮಣಿಪುರ: ಅನಿರ್ದಿಷ್ಟಾವಧಿ ಬಂದ್; ಕುಕಿ ಪ್ರಾಬಲ್ಯದ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತ
PC : PTI
ಇಂಫಾಲ: ಭದ್ರತಾ ಪಡೆಗಳ ದಮನ ಕಾರ್ಯಾಚರಣೆಯನ್ನು ವಿರೋಧಿಸಿ ಕುಕಿ-ರೊ ಗುಂಪುಗಳು ಕರೆ ನೀಡಿರುವ ಅನಿರ್ದಿಷ್ಟಾವಧಿ ಬಂದ್‌ನಿಂದಾಗಿ ಮಣಿಪುರದ ಕುಕಿ ಪ್ರಾಬಲ್ಯದ ಪ್ರದೇಶಗಳಲ್ಲಿ ರವಿವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಂಗ್‌ಪೊಕ್ಪಿ ಜಿಲ್ಲೆಯಲ್ಲಿ ಶನಿವಾರ ಕುಕಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟು 40 ಮಂದಿ ಗಾಯಗೊಂಡಿದ್ದರು. ರವಿವಾರ ಅಲ್ಲಿನ ಪರಿಸ್ಥಿತಿ ಉದ್ವಗ್ನತೆಯಿಂದ ಕೂಡಿದ್ದರೂ, ಶಾಂತಿ ನೆಲೆಸಿತ್ತು.
ಚುರಚಾಂದ್‌ಪುರ ಮತ್ತು ಟೆಂಗ್‌ನೌಪಲ್ ಜಿಲ್ಲೆಗಳ ಇತರ ಕುಕಿ ಪ್ರಾಬಲ್ಯದ ಪ್ರದೇಶಗಳಲ್ಲಿ, ಪ್ರತಿಭಟನಾಕಾರರು ರಸ್ತೆಗಳಲ್ಲಿ ಟಯರ್‌ಗಳನ್ನು ಸುಟ್ಟು ಬಂಡೆಗಲ್ಲುಗಳನ್ನು ಹಾಕಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು. ಭದ್ರತಾ ಪಡೆಗಳು ರಸ್ತೆಗಳನ್ನು ತೆರವುಗೊಳಿಸಿವೆ.
ಹೊಸದಾಗಿ ಹಿಂಸಾಕೃತ್ಯಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ರಾಜ್ಯದ ಕುಕಿ ಪ್ರಾಬಲ್ಯದ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು ಹಾಗೂ ವಾಹನಗಳು ಅತ್ಯಂತ ವಿರಳವಾಗಿ ಓಡಾಡುತ್ತಿದ್ದವು. ಪ್ರತಿಭಟನಾಕಾರರು ಮನೆಯೊಳಗೇ ಇರುವಂತೆ ಜನರನ್ನು ವಿನಂತಿಸುತ್ತಿರುವುದು ಕಂಡುಬಂತು.
ಕುಕಿ ಪ್ರಾಬಲ್ಯದ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿಯು ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಕೇಂದ್ರ ಸರಕಾರವು ಫೆಬ್ರವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಧಿಸಿದೆ. ಅದಕ್ಕೂ ಮೊದಲು, ಮುಖ್ಯಮಂತ್ರಿ ಎನ್. ಬೀರೇಂದ್ರ ಸಿಂಗ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. 2027ರವರೆಗೆ ಅವಧಿ ಹೊಂದಿರುವ ಮಣಿಪುರ ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದೆ.