ಮಣಿಪುರ: ಪ್ರವಾಹದಿಂದ 19,000 ಮಂದಿ ಸಂತ್ರಸ್ತರು
Update: 2025-06-02 21:13 IST
PC : PTI
ಇಂಫಾಲ: ಮಣಿಪುರದಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು ಮತ್ತು ಅಣೆಕಟ್ಟುಗಳ ಬಿರುಕುಗಳಿಂದಾಗಿ ತಲೆದೋರಿರುವ ಪ್ರವಾಹದಿಂದಾಗಿ 19,000ಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಸುರಿದಿರುವ ನಿರಂತರ ಜಡಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ 3,365 ಮನೆಗಳು ಹಾನಿಗೊಳಗಾಗಿವೆ ಮತ್ತು 19,811 ಜನರು ಬಾಧಿತರಾಗಿದ್ದಾರೆ ಎಂದು ಅವರು ಹೇಳಿದರು.
ಜಲಾವೃತ ಮನೆಗಳಿಂದ ರಕ್ಷಿಸಲ್ಪಟ್ಟಿರುವ ಜನರಿಗಾಗಿ 31 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಪೈಕಿ ಹೆಚ್ಚಿನ ಶಿಬಿರಗಳು ಇಂಫಾಲ ಪೂರ್ವ ಜಿಲ್ಲೆಯಲ್ಲಿವೆ.
ಇಂಫಾಲ ಪೂರ್ವ ಜಿಲ್ಲೆಯಲ್ಲಿರುವ ಹೇಂಗಂಗ್, ವಾಂಗ್‌ಖೇ ಮತ್ತು ಖುರಲ್ ವಿಧಾನಸಭಾ ಕ್ಷೇತ್ರಗಳು ಹಾಗೂ ಸೇನಾಪತಿ ಜಿಲ್ಲೆಯ ಕೆಲವು ಭಾಗಗಳು ಪ್ರವಾಹದಿಂದಾಗಿ ಹೆಚ್ಚಿನ ಹಾನಿಗೊಳಗಾಗಿವೆ.
ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 47 ಭೂಕುಸಿತಗಳು ಸಂಭವಿಸಿವೆ.