ಮಣಿಪುರ | ಮೈತೇಯಿ ನಾಯಕನ ಬಂಧನ: ನಿಷೇಧಾಜ್ಞೆ ಜಾರಿ, ಅಂತರ್ಜಾಲ ಸೇವೆ ಅಮಾನತು
PC: PTI
ಇಂಫಾಲ: ಮೈತೇಯಿ ಸಮುದಾಯದ ಅರಂಬಾಯಿ ತೆಂಗೋಲ್ ಸಂಘಟನೆಯ ನಾಯಕರೊಬ್ಬರನ್ನು ಬಂಧಿಸಿದ ಮರುದಿನವೇ ಮಣಿಪುರದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪರಿಸ್ಥಿತಿ ಪ್ರಕ್ಷುಬ್ಧವಾಗಿಯೇ ಮುಂದುವರಿದಿದೆ. ಹೀಗಾಗಿ, ರವಿವಾರ ಇಂಫಾಲದ ಐದು ಕಣಿವೆ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಜಿಲ್ಲಾಡಳಿತ, ಮಣಿಪುರದ ಕೆಲ ಭಾಗಗಳಲ್ಲಿ ಅಂತರ್ಜಾಲ ಸೇವೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ಇಂಫಾಲ, ಪೂರ್ವ ಇಂಫಾಲ, ತೌಬಾಲ್, ಬಿಷ್ಣುಪುರ್ ಹಾಗೂ ಕಾಕ್ಚಿಂಗ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಕಣಿವೆ ಪ್ರದೇಶಗಳಲ್ಲಿ ವಿಸ್ಯಾಟ್ ಹಾಗೂ ವಿಪಿಎನ್ ಸೌಲಭ್ಯಗಳು ಸೇರಿದಂತೆ ಅಂತರ್ಜಾಲ ಹಾಗೂ ಮೊಬೈಲ್ ಡಾಟಾ ಸೇವೆಗಳನ್ನು ಅಮಾನತುಗೊಳಿಸಲಾಗಿದೆ.
ಮೈತೇಯಿ ಸಂಘಟನೆಯ ನಾಯಕನನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನಾಕಾರರು ಕ್ವಾಕೈತೆಲ್ ಹಾಗೂ ಉರಿಪೋಕ್ ನ ರಸ್ತೆಗಳ ಮಧ್ಯ ಭಾಗದಲ್ಲಿ ಟೈರ್ ಗಳು ಹಾಗೂ ಹಳೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಆಗ್ರಹಿಸಿದರು. ಶನಿವಾರ ರಾತ್ರಿ ರಾಜ್ಯ ರಾಜಧಾನಿ ಇಂಫಾಲದಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆಗೂ ಇಳಿದರು. ಪೂರ್ವ ಇಂಫಾಲ ಜಿಲ್ಲೆಯ ಖುರೈ ಲ್ಯಾಮ್ ಲಾಂಗ್ ನಲ್ಲಿ ಉದ್ರಿಕ್ತ ಗುಂಪೊಂದು ಬಸ್ ಗೆ ಬೆಂಕಿ ಹಚ್ಚಿತು.
ಈ ಹಿನ್ನೆಲೆಯಲ್ಲಿ, ರಾಜಭವನದತ್ತ ತೆರಳುವ ರಸ್ತೆಗಳಲ್ಲಿ ಹೆಚ್ಚುವರಿ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸುವ ಮೂಲಕ, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಪ್ರಕ್ಷುಬ್ಧಗೊಂಡಿರುವ ಮಣಿಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, “ಈ ಭಾಗದಲ್ಲಿ ಗಂಭೀರ ಸ್ವರೂಪದ ಶಾಂತಿ ಭಂಗ, ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ, ಗಲಭೆ ಅಥವಾ ಕಾನೂನು ಉಲ್ಲಂಘನೆ ಕಂಡು ಬಂದಿದೆ ಹಾಗೂ ಸಮಾಜ ವಿರೋಧಿ ಶಕ್ತಿಗಳ ಕಾನೂನು ಬಾಹಿರ ಚಟುವಟಿಕೆಗಳಿಂದ ಮನುಷ್ಯರ ಜೀವ ಮತ್ತು ಆಸ್ತಿಪಾಸ್ತಿಗಳಿಗೆ ಗಂಭೀರ ಸ್ವರೂಪದ ಅಪಾಯವುಂಟಾಗಿದೆ ಎಂದು ಪಶ್ಚಿಮ ಇಂಫಾಲದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿರುವ ವರದಿಯನ್ನು ಆಧರಿಸಿ, ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ” ಎಂದು ಪಶ್ಚಿಮ ಇಂಫಾಲ ಜಿಲ್ಲೆಯ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.