×
Ad

ಮಣಿಪುರ: ಮರುಕುಳಿಸಿದ ಗುಂಪು ಘರ್ಷಣೆ, ಬಸ್‌ಗಳಿಗೆ ಬೆಂಕಿ

Update: 2025-03-08 20:41 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: ಮಣಿಪುರದಲ್ಲಿ ಕೇಂದ್ರ ಸರಕಾರವು ಸಾರ್ವಜನಿಕರ ಮುಕ್ತ ಸಂಚಾರಕ್ಕೆಅವಕಾಶ ನೀಡುವ ಕುರಿತ ನಿರ್ದೇಶನವು ಶನಿವಾರ ಜಾರಿಗೆ ಬಂದಿರುವಂತೆಯೇ, ರಾಜ್ಯದಲ್ಲಿ ಗುಂಪು ಘರ್ಷಣೆ, ಬಸ್‌ಗಳಿಗೆ ಬೆಂಕಿ ಹಾಗೂ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ ಘಟನೆಗಳು ವರದಿಯಾಗಿವೆ.

ಪರ್ವತಜಿಲ್ಲೆಗಳಲ್ಲಿ ಸಾರ್ವಜನಿಕರ ಮುಕ್ತ ಸಂಚಾರವನ್ನು ವಿರೋಧಿಸಿ ರಸ್ತೆ ತಡೆಯುಂಟುಮಾಡಲಾಗಿತ್ತು ಹಾಗೂ ತಡೆಬೇಲಿಗಳನ್ನು ನಿರ್ಮಿಸಲಾಗಿತ್ತು. ಕಾಗ್‌ಪೊಕ್ಪಿಯಲ್ಲಿ ಮಣಿಪುರ ರಸ್ತೆ ಸಾರಿಗೆ ಬಸ್ ಮೇಲೆ ದಾಳಿ ನಡೆಸಲಾಗಿದೆ. ಮಣಿಪುರದ ರಾಜಧಾನಿ ಇಂಫಾಲದಿಂದ ಪರ್ವತ ಜಿಲ್ಲೆಗಳಿಗೆ ಅಂತರ್‌ಜಿಲ್ಲಾ ಬಸ್‌ಸೇವೆಗಳನ್ನು ಎರಡು ವರ್ಷಗಳ ಬಳಿಕ ಪುನಾರಂಭಿಸಲಾಗಿತ್ತು.

ಸೇನಾಪತಿ ಜಿಲ್ಲೆಗೆ ತೆರಳುತ್ತಿದ್ದ ಬಸ್ಸೊಂದರ ಮೇಲೆ ಕಾಗ್‌ಪೊಕ್ಪಿ ಜಿಲ್ಲೆಯ ಗಾಮ್‌ಗಿಫಾಯಿ ಪ್ರದೇಶದಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಆಗ ಸ್ಥಳದಲ್ಲಿದ್ದ ಭದ್ರತಾಪಡೆಗಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದೆ ಹಾಗೂ ಲಾಠಿಪ್ರಹಾರ ನಡೆಸಿದ್ದು, ಹಲವಾರು ಮಂದಿ ಪ್ರತಿಭಟನಕಾರರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರ್ವತ ಜಿಲ್ಲೆಗಳಾದ ಚುರಾಚಂದ್‌ಪುರ ಹಾಗೂ ಸೇನಾಪತಿಗೆ ತೆರಳುತ್ತಿದ್ದ ಬಸ್‌ಗಳು ಸುಮಾರು 10 ಗಂಟೆಯ ವೇಳೆಗೆ ಪ್ರಯಾಣಿಕರಿಲ್ಲದೆಯೇ ಸಂಚಾರವನ್ನು ಆರಂಭಿಸಿದ್ದವು. ಈ ವಾಹನಗಳಿಗೆ ಸೇನಾ ಸಿಬ್ಬಂದಿ ಸೇರಿದಂತೆ ಕೇಂದ್ರೀಯ ಪಡೆಗಳ ವಾಹನವ್ಯೆಹವು ಬೆಂಗಾವಲಾಗಿ ಪ್ರಯಾಣಿಸಿದ್ದವು ಎಂದು ಮೂಲಗಳು ತಿಳಿಸಿವೆ.

ಯಾವುದೇ ಅಡೆತಡೆಯಿಲ್ಲದೆ ಈ ಬಸ್ ಬಿಷ್ಣುಪುರ ಜಿಲ್ಲೆಯನ್ನು ದಾಟಿದ ಬಳಿಕ ಕಾಂಗ್‌ವಾಯಿಯನ್ನು ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಗ್‌ಪೊಕ್‌ಪಿಯಿಂದ ಸೇನಾಪತಿ ಜಿಲ್ಲೆಗ ಪ್ರಯಾಣಿಸುತ್ತಿದ್ದ ಬಸ್‌ಕೂಡಾ ಯಾವುದೇ ಅಡೆತಡೆಯನ್ನು ಎದುರಿಸಲಿಲ್ಲವೆಂದು ಅವು ಹೇಳಿವೆ.

ಸಾರ್ವಜನಿಕ ಅನಾನುಕೂಲತೆಯನ್ನು ನಿವಾರಿಸಲು ಹಾಗೂ ರಾಜ್ಯದಲ್ಲಿ ಸಹಜತೆಯನ್ನು ಜಾರಿಗೆ ತರಲು ರಾಜ್ಯ ಸಾರಿಗೆ ಬಸ್ ಸೇವೆಗಳನ್ನು ಪುನಾರಂಭಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 8ರಿಂದ ಮಣಿಪುರದಲ್ಲಿರುವ ಎಲ್ಲಾ ಮಾರ್ಗಗಳಲ್ಲಿ ಜನರ ಮುಕ್ತ ಚಲನವಲನವನ್ನು ಖಾತರಿಪಡಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದ ಆನಂತರ ಅಂತರ್‌ಜಿಲ್ಲಾ ಬಸ್ ಸೇವೆಗಳನ್ನು ಪುನಾರಂಭಿಸಲಾಗಿತ್ತು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಾಜ್ಯ ಸರಕಾರವು ಇಂಫಾಲದಿಂದ ಕಾಂಗ್‌ಪೊಕ್ಪಿ ಹಾಗೂ ಚುರಾಚಂದ್‌ಪುರಕ್ಕೆ ಸಾರ್ವಜನಿಕ ಬಸ್‌ಸೇವೆಗಳನ್ನು ಪುನರಾಂಭಿಸಲು ಯತ್ನಿಸಿತ್ತು. ಆದರೆ ಬಸ್ ಸಂಚಾರ ಆರಂಭವಾಗಲಿದ್ದ ಇಂಫಾಲಾದ ಮೊಯಿರಾಂಗ್‌ಖೋಮ್‌ನಲ್ಲಿರುವ ಮಣಿಪುರ ರಾಜ್ಯ ಸಾರಿಗೆ (ಎಂಎಸ್‌ಟಿ) ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕರು ಬಾರದೆ ಇದ್ದುದರಿಂದ ಆ ಪ್ರಯತ್ನ ವಿಫಲವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News