×
Ad

ಅಕ್ರಮ ಗಣಿಗಾರಿಕೆ ಪ್ರಕರಣ: ಬಿಜೆಪಿ ಶಾಸಕ ತನ್ನನ್ನು ಸಂಪರ್ಕಿಸಲು ಯತ್ನಿಸಿದ್ದರೆಂದು ಆರೋಪಿಸಿ ವಿಚಾರಣೆಯಿಂದ ಹಿಂದೆ ಸರಿದ ಮ.ಪ್ರ. ಹೈಕೋರ್ಟ್ ನ್ಯಾಯಾಧೀಶ

Update: 2025-09-03 15:30 IST

ಸಾಂದರ್ಭಿಕ ಚಿತ್ರ

ಭೋಪಾಲ: ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ವಿಶಾಲ ಮಿಶ್ರಾ ಅವರು ಅಕ್ರಮ ಗಣಿಗಾರಿಕೆ ಪ್ರಕರಣವೊಂದರ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಬಿಜೆಪಿ ಶಾಸಕ ಸಂಜಯ ಪಾಠಕ್ ಅವರು ತನ್ನನ್ನು ಸಂಪರ್ಕಿಸಲು ಮತ್ತು ಈ ವಿಷಯದ ಬಗ್ಗೆ ಚರ್ಚಿಸಲು ಯತ್ನಿಸಿದ್ದರು ಎಂದು ಆರೋಪಿಸಿರುವ ಅವರು, ಆದ್ದರಿಂದ ಈ ರಿಟ್ ಅರ್ಜಿಯನ್ನು ಪರಿಗಣಿಸಲು ತಾನು ಒಲವು ಹೊಂದಿಲ್ಲ ಎಂದು ಹೇಳಿದ್ದಾರೆ.

ಬೇರೊಂದು ಪೀಠದ ಮುಂದೆ ಪಟ್ಟಿ ಮಾಡಲು ವಿಷಯವನ್ನು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸುವಂತೆಯೂ ಅವರು ಆದೇಶಿಸಿದ್ದಾರೆ.

ಐದು ಬಾರಿ ಶಾಸಕರಾಗಿರುವ ಪಾಠಕ್ ಕಟ್ನಿ ಜಿಲ್ಲೆಯ ವಿಜಯರಾಘವಗಢ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 2016ರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರಕಾರದಲ್ಲಿ ಎಂಎಸ್‌ಎಂಇ ರಾಜ್ಯ ಸಚಿವರಾಗಿದ್ದರು.

ಪಾಠಕ್ ಮತ್ತು ಅವರ ಕುಟುಂಬದೊಂದಿಗೆ ನಂಟು ಹೊಂದಿರುವ ಕಂಪನಿಗಳು ನಡೆಸಿದ ಅಕ್ರಮ ಗಣಿಗಾರಿಕೆಯ ತನಿಖೆಯಲ್ಲಿ ಆರ್ಥಿಕ ಅಪರಾಧಗಳ ಘಟಕವು ನಿಷ್ಕ್ರಿಯವಾಗಿದೆ ಎಂದು ʼವಿಸಲ್‌ಬ್ಲೋವರ್ʼ ಅಶುತೋಷ್ ದೀಕ್ಷಿತ್ ಅವರು ರಿಟ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಸುದ್ದಿಸಂಸ್ಥೆಯ ವರದಿ ಪ್ರಕಾರ,‌ ಪಾಠಕ್ ಜೊತೆ ಸಂಬಂಧವನ್ನು ಹೊಂದಿರುವ ಕಂಪನಿಗಳು ಕಾನೂನು ಮಿತಿಗಳನ್ನು ಮೀರಿ 440 ಕೋಟಿ ರೂ.ಮೌಲ್ಯದ ಕಬ್ಬಿಣದ ಅದಿರನ್ನು ಹೊರತೆಗೆದಿವೆ ಹಾಗೂ 80 ಕೋಟಿ ರೂ.ಗಳ ಜಿಎಸ್‌ಟಿಯನ್ನು ವಂಚಿಸಿವೆ ಎಂದು ಆರೋಪಿಸಲಾಗಿದೆ.

ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ತನಗೆ ಅನುಮತಿ ನೀಡಬೇಕೆಂದು ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪಾಠಕ್, ತಾನು ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಬೇಕು ಎಂದು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News