×
Ad

ಮುರ್ಷಿದಾಬಾದ್ ಹಿಂಸಾಚಾರದ ವೇಳೆ ಮಮತಾ ಸರಕಾರ ನಿಷ್ಕರುಣಿಯಾಗಿತ್ತು: ಮೋದಿ

Update: 2025-05-29 21:44 IST

ಮಮತಾ ಬ್ಯಾನರ್ಜಿ , ನರೇಂದ್ರ ಮೋದಿ | PTI 

ಕೋಲ್ಕತಾ: ಇತ್ತೀಚೆಗೆ ಮುರ್ಷಿದಾಬಾದ್ ಮತ್ತು ಮಾಲ್ಡದಲ್ಲಿ ನಡೆದ ಹಿಂಸಾಚಾರಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ತುಷ್ಟೀಕರಣದ ಹೆಸರಿನಲ್ಲಿ ಗೂಂಡಾಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು ಮತ್ತು ಪೊಲೀಸರು ಕೇವಲ ಪ್ರೇಕ್ಷಕರಾಗಿದ್ದರು ಎಂದು ಅವರು ಆರೋಪಿಸಿದ್ದಾರೆ.

‘‘ಮುರ್ಷಿದಾಬಾದ್ ಮತ್ತು ಮಾಲ್ಡದಲ್ಲಿ ನಡೆದಿರುವುದು ಸರಕಾರದ ನಿಷ್ಕರುಣೆಗೆ ಉದಾಹರಣೆಯಾಗಿದೆ. ತುಷ್ಟೀಕರಣದ ಹೆಸರಿನಲ್ಲಿ ಅಲ್ಲಿ ಗೂಂಡಾಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿತ್ತು. ಸರಕಾರ ನಡೆಸುವ ಪಕ್ಷವೊಂದಕ್ಕೆ ಸೇರಿದವರು ಜನರ ಮನೆಗಳನ್ನು ಗುರುತಿಸಿ ಸುಡುವ ಮತ್ತು ಪೊಲೀಸರು ಕೇವಲ ಪ್ರೇಕ್ಷಕರಾಗಿಬಿಡುವ ಭಯಾನಕ ಪರಿಸ್ಥಿತಿಯನ್ನು ಒಮ್ಮೆ ಕಲ್ಪಿಸಿಕೊಳ್ಳಿ’’ ಎಂದು ಪಶ್ಚಿಮ ಬಂಗಾಳದ ಅಲಿಪುರುದ್ವಾರ್‌ನಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ ನುಡಿದರು.

‘‘ನಾನು ಬಂಗಾಳದ ಬಡ ಜನತೆಯನ್ನು ಕೇಳುತ್ತೇನೆ- ಸರಕಾರವೊಂದು ನಡೆಯುವ ರೀತಿ ಇದೆಯೇ? ಇಲ್ಲಿ, ಪ್ರತಿಯೊಂದು ವಿಷಯದಲ್ಲೂ ನ್ಯಾಯಾಲಯ ಮಧ್ಯಪ್ರವೇಶಿಸಬೇಕಾಗುತ್ತದೆ. ಇಲ್ಲದಿದ್ದರೆ ಯಾವುದಕ್ಕೂ ಪರಿಹಾರವಿಲ್ಲ. ಬಂಗಾಳದ ಜನತೆ ಇನ್ನೆಂದೂ ಟಿಎಮ್‌ಸಿ ಸರಕಾರವನ್ನು ನಂಬುವುದಿಲ್ಲ’’ ಎಂದು ಪ್ರಧಾನಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ನಡೆದ ಪ್ರತಿಭಟನೆಯ ವೇಳೆ, ಎಪ್ರಿಲ್ 11ರಂದು ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ನಡೆದಿತ್ತು. ಹಿಂಸೆಯಲ್ಲಿ ಮೂವರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News