ಮುರ್ಷಿದಾಬಾದ್ ಹಿಂಸಾಚಾರ: ತಂದೆ-ಮಗನ ಹತ್ಯೆ ಪ್ರಕರಣದಲ್ಲಿ 13 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
PC : PTI
ಕೋಲ್ಕತ್ತಾ: ಕಳೆದ ಎಪ್ರಿಲ್ ತಿಂಗಳಲ್ಲಿ ಮುರ್ಷಿದಾಬಾದ್‌ನ ಝಫರ್‌ಗಂಜ್ ಹಿಂಸಾಚಾರದಲ್ಲಿ ನಡೆದಿದ್ದ ತಂದೆ-ಮಗನ ಅವಳಿ ಹತ್ಯೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಪೊಲೀಸರು 13 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಪ್ರಿಲ್ 11ರಂದು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ವೇಳೆ, ಧುಲಿಯಾನ್ ಸೂತಿ ಶಂಶೇರ್‌ಗಂಜ್ ನಲ್ಲಿ ನಡೆದಿದ್ದ ಕೋಮು ಹಿಂಸಾಚಾರದಲ್ಲಿ ಹರಗೋಬಿಂದೊ ದಾಸ್ (74) ಹಾಗೂ ಅವರ ಪುತ್ರ ಚಂದನ್ ದಾಸ್ (40) ಹತ್ಯೆ ನಡೆದಿತ್ತು.
ಈ ಹಿಂಸಾಚಾರದಲ್ಲಿ ಕನಿಷ್ಠ ಮೂರು ಮಂದಿ ಮೃತಪಟ್ಟು, ನೂರಾರು ಮಂದಿ ತಮ್ಮ ನಿವಾಸಗಳನ್ನು ತೊರೆದಿದ್ದರು.
ಎಪ್ರಿಲ್ 8ರಿಂದ 12ರವರೆಗೆ ನಡೆದಿದ್ದ ಈ ಹಿಂಸಾಚಾರದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಭಾರಿ ಪ್ರಮಾಣದ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲು ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು.
ಈ ಹಿಂಸಾಚಾರದ ನಂತರ, ಈ ಸಂಬಂಧ 300 ಮಂದಿ ಶಂಕಿತ ದುಷ್ಕರ್ಮಿಗಳನ್ನು ಬಂಧಿಸಿದ್ದ ಪೊಲೀಸರು, ಮುರ್ಷಿದಾಬಾದ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಎಫ್ಐಆರ್‌ಗಳನ್ನು ದಾಖಲಿಸಿದ್ದರು.