ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿ: ಬಿಜೆಪಿಗೆ ತೇಜಸ್ವಿ ಯಾದವ್ ಸವಾಲು
ತೇಜಸ್ವಿ ಯಾದವ್ | Photo Credit ; PTI
ಪಾಟ್ನಾ: ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಎಂದು ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಆರ್ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ಬಿಜೆಪಿಗೆ ಸವಾಲು ಹಾಕಿದ್ದಾರೆ.
ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ತೇಜಸ್ವಿ ಯಾದವ್, “ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಗೊಂದಲವಿರಲಿಲ್ಲ. ಈ ವಿಷಯದಲ್ಲಿ ನಮಗೆ ಮೊದಲೇ ಸ್ಪಷ್ಟತೆ ಇತ್ತು. ನಮಗೆ ಗೊಂದಲವಿರುವುದು ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ. ಇಲ್ಲಿಯವರೆಗೆ ಅವರು ಯಾವುದೇ ಜಂಟಿ ಪತ್ರಿಕಾಗೋಷ್ಠಿ ನಡೆಸಿಲ್ಲ. ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಿಲ್ಲ” ಎಂದು ಹೇಳಿದ್ದಾರೆ.
“ಅಮಿತ್ ಶಾ ಅವರ ಹೇಳಿಕೆಯನ್ನು ಗಮನಿಸಿದರೆ, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಚುನಾವಣೆಯ ನಂತರ ಶಾಸಕಾಂಗ ಪಕ್ಷದ ನಾಯಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ. ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುವುದು ಬಿಜೆಪಿಗೆ ಬೇಕಿಲ್ಲ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ನಮಗಿರುವುದು ಒಂದೇ ಗುರಿ. ಅದು ಬಿಹಾರವನ್ನು ದೇಶದಲ್ಲೇ ನಂಬರ್ ಒನ್ ಮಾಡುವುದು. ಇದನ್ನು ಸಾಧಿಸಬೇಕಾದರೆ ನಮಗೆ 14 ಕೋಟಿ ಬಿಹಾರಿಗಳ ಬೆಂಬಲ ಬೇಕು. ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಆಧಾರರಹಿತವಾಗಿ ಹೇಳಿಕೆ ನೀಡುವುದಿಲ್ಲ. ನಾನು ಕೊಟ್ಟ ಮಾತಿನಂತೆ ನಡೆಯುವ ವ್ಯಕ್ತಿಯಾಗಿದ್ದು, ಹೇಳಿದ್ದನ್ನು ಮಾಡಿ ತೋರಿಸುತ್ತೇನೆ. ಬಿಹಾರವನ್ನು ದೇಶದಲ್ಲೇ ನಂಬರ್ ಒನ್ ಮಾಡುವುದು ನಮ್ಮ ಕನಸು” ಎಂದು ತಿಳಿಸಿದ್ದಾರೆ.
“ನಾವು ಹೊಸ ಬಿಹಾರವನ್ನು ನಿರ್ಮಿಸಬೇಕಿದ್ದು, ಬಿಹಾರದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಅವರು ಅಭಿವೃದ್ಧಿ ಹೊಂದಿದ ಬಿಹಾರವನ್ನು ನೋಡಲು ಬಯಸುತ್ತಿದ್ದಾರೆ. ಅತ್ಯಂತ ಹಿಂದುಳಿದ ಸಮುದಾಯದ ಮುಖೇಶ್ ಸಹಾನಿಯನ್ನು ಉಪ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದ್ದು, ಅವರೊಂದಿಗೆ ವಿವಿಧ ಸಮುದಾಯದ ಇತರ ಉಪ ಮುಖ್ಯಖಮಂತ್ರಿಗಳೂ ಇರಲಿದ್ದಾರೆ” ಎಂದು ಹೇಳಿದ್ದಾರೆ.