×
Ad

ಮಹಾರಾಷ್ಟ್ರ | ನೀಟ್ ಅರ್ಹತೆ ಪಡೆದ ವಿದ್ಯಾರ್ಥಿ ಆತ್ಮಹತ್ಯೆ

Update: 2025-09-24 21:39 IST

  ಸಾಂದರ್ಭಿಕ ಚಿತ್ರ

ಮುಂಬೈ, ಸೆ. 24: ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ಎಐಐಎಂಎಸ್ ಗೋರಖ್‌ಪುರದಲ್ಲಿ ಪ್ರವೇಶ ಪಡೆದುಕೊಂಡಿದ್ದ 20 ವರ್ಷದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಸಿಂದೇವಾಹಿ ತಾಲೂಕಿನ ನವರ್‌ಗಾಂವ್‌ನ ನಿವಾಸಿ ಅನುರಾಗ್ ಅನಿಲ್ ಬೋರ್ಕರ್ ಎಂದು ಗುರುತಿಸಲಾಗಿದೆ. ಈತನ ಮೃತದೇಹ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅನುರಾಗ್ ಈ ವರ್ಷ ನೀಟ್‌ನಲ್ಲಿ ಇತರ ಹಿಂದುಳಿದ ವರ್ಗದ ಅಡಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 1,475 ರ್ಯಾಂಕ್ ಪಡೆದುಕೊಂಡಿದ್ದ. ಆತನಿಗೆ ಎಐಐಎಂಎಸ್ ಗೋರಖ್‌ಪುರದಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೀಟು ದೊರಕಿತ್ತು.

‘ಇಂಡಿಯಾ ಟುಡೆ’ ವರದಿ ಪ್ರಕಾರ, ಆತನ ಕೊಠಡಿಯಲ್ಲಿ ಪತ್ತೆಯಾಗಿರುವ ಸುಸೈಡ್ ನೋಟ್‌ನಲ್ಲಿ ಆತನಿಗೆ ಎಂಬಿಬಿಎಸ್ ಓದಲು ಇಷ್ಟವಿಲ್ಲದಿರುವುದು ಬಹಿರಂಗಗೊಂಡಿದೆ. ‘‘ನನಗೆ ಎಂಬಿಬಿಎಸ್ ಓದಲು ಇಷ್ಟವಿಲ್ಲ. ಓರ್ವ ಉದ್ಯಮಿ ವೈದ್ಯನಿಗಿಂತ ಹೆಚ್ಚು ಗಳಿಸುತ್ತಾನೆ. ನನಗೆ 5 ವರ್ಷ ಎಂಬಿಬಿಎಸ್ ಮಾಡಿ ಅನಂತರ ಎಂಡಿ ಮಾಡಲು ಇಷ್ಟವಿಲ್ಲ’’ ಎಂದು ಆತ ಪತ್ರದಲ್ಲಿ ಹೇಳಿದ್ದಾನೆ.

ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News