×
Ad

ಎಫ್‌ಐಆರ್ ದಾಖಲು | ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

Update: 2024-09-29 21:24 IST

ಅಭಿಷೇಕ್ ಸಿಂಘ್ವಿ , ಜೈರಾಮ್ ರಮೇಶ್ | PC : PTI

ಹೊಸದಿಲ್ಲಿ : ಈಗ ರದ್ದುಪಡಿಸಲಾಗಿರುವ ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ದೂರಿನ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ಕಾಂಗ್ರೆಸ್ ರವಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ ಹಾಗೂ ಪ್ರಜಾಪ್ರಭುತ್ವವನ್ನು ಕಡೆಗಣಿಸಿರುವುದಕ್ಕೆ ನಿರ್ಮಲಾ ಸೀತಾರಾಮನ್ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿದೆ.

ಸಂಪೂರ್ಣ ಚುನಾವಣಾ ಬಾಂಡ್ ಯೋಜನೆಯ ಕುರಿತು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮೂಲಕ ತನಿಖೆ ನಡೆಸಬೇಕು ಎಂಬ ತನ್ನ ಆಗ್ರಹವನ್ನು ಕಾಂಗ್ರೆಸ್ ಪುನರುಚ್ಛರಿಸಿದೆ.

ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರೊಂದಿಗೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, ಚುನಾವಣಾ ಬಾಂಡ್‌ಗಳ ಪಿತೂರಿ ಮೂಲಕ ಹಣ ಸುಲಿಗೆ ಮಾಡಲು ನಾಲ್ಕು ದಾರಿಗಳನ್ನು ಬಳಸಲಾಗಿದೆ. ಪ್ರೀಪೇಯ್ಡ್ ಲಂಚ, ಪೋಸ್ಟ್ ಪೇಯ್ಡ್ ಲಂಚ, ಪೋಸ್ಟ್ ದಾಳಿ ಲಂಚ ಹಾಗೂ ಬೇನಾಮಿ ಕಂಪೆನಿಗಳ ಮೂಲಕ ಲಂಚ ಎಂದು ಅವರು ಹೇಳಿದರು.

ರಾಜಕೀಯವಾಗಿ, ಕಾನೂನಾತ್ಮಕವಾಗಿ ಹಾಗೂ ನೈತಿಕವಾಗಿ ತಪ್ಪೆಸಗಿರುವುದರಿಂದ ನಿರ್ಮಲಾ ಸೀತಾರಾಮನ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು.

ನ್ಯಾಯಾಲಯದ ಆದೇಶದಂತೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಿಸುವಲ್ಲಿ ಕಾಂಗ್ರೆಸ್‌ನ ಪಾತ್ರವಿಲ್ಲ. ಚುನಾವಣಾ ಬಾಂಡ್ ಯೋಜನೆ ಕುರಿತು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಬ್ಬರೇ ಇದನ್ನು ಮಾಡಲು ಸಾಧ್ಯವಿಲ್ಲ. ನಂಬರ್ 1 ಹಾಗೂ ನಂಬರ್ 2 ಯಾರು ಎಂಬುದು ನಮಗೆ ಗೊತ್ತು. ಅವರ ನಿರ್ದೇಶನದಲ್ಲಿ ಇದನ್ನು ಮಾಡಲಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News