ಸುಂಕ ಕಡಿತ ಬಗ್ಗೆ ಅಮೆರಿಕಕ್ಕೆ ಯಾವುದೇ ಭರವಸೆ ನೀಡಿಲ್ಲ: ಸಂಸದೀಯ ಸಮಿತಿಗೆ ಸರ್ಕಾರ ಸ್ಪಷ್ಟನೆ
ಸುನೀತ್ ಬರ್ತ್ವಾಲ್ PC: ANI
ಹೊಸದಿಲ್ಲಿ: ಅಮೆರಿಕದ ವಸ್ತುಗಳ ಮೇಲೆ ವಿಧಿಸುವ ಸುಂಕ ಕಡಿತಕ್ಕೆ ಭಾರತ ಬದ್ಧವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಸಂಸದೀಯ ಸಮಿತಿಗೆ ಸ್ಪಷ್ಟನೆ ನೀಡಿರುವ ಭಾರತ ಸರ್ಕಾರ, "ಸರ್ಕಾರ ಅಂಥ ಯಾವ ವಚನಬದ್ಧತೆಯನ್ನೂ ನೀಡಿಲ್ಲ" ಎಂದು ಹೇಳಿದೆ. ಅಮೆರಿಕದ ಅಧ್ಯಕ್ಷರು ಪದೇ ಪದೇ ಎತ್ತುತ್ತಿರುವ ಈ ವಿಷಯದ ಇತ್ಯರ್ಥಕ್ಕೆ ಸೆಪ್ಟೆಂಬರ್ ವರೆಗೆ ಕಾಲಾವಕಾಶ ಕೋರಿದೆ ಎಂದು ಸ್ಪಷ್ಟಪಡಿಸಿದೆ.
ವಿದೇಶಾಂಗ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾದ ವಾಣಿಜ್ಯ ಕಾರ್ಯದರ್ಶಿ ಸುನೀತ್ ಬರ್ತ್ವಾಲ್ ಈ ಬಗ್ಗೆ ಹೇಳಿಕೆ ನೀಡಿ, ಭಾರತ ಹಾಗೂ ಅಮೆರಿಕದ ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿವೆ. ತಕ್ಷಣದ ಸುಂಕ ಹೊಂದಾಣಿಕೆ ಬದಲಾಗಿ ಧೀರ್ಘಾವಧಿ ವ್ಯಾಪಾರ ಸಹಕಾರ ಏರ್ಪಡಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತಿವೆ ಎಂದು ಹೇಳಿದ್ದಾಗಿ ತಿಳಿದು ಬಂದಿದೆ.
ಭಾರತದ ವಿರುದ್ಧ ಸುಂಕ ವಿಧಿಸುವ ಬಗೆಗಿನ ಆತಂಕವನ್ನು ತಳ್ಳಿಹಾಕಿದ ಅವರು, ಚೀನಾ, ಕೆನಡಾ ಮತ್ತು ಮೆಕ್ಸಿಕೋ ದೇಶಗಳಿಗಿಂತ ಭಿನ್ನವಾಗಿ ವ್ಯಾಪಾರ ಒಪ್ಪಂದಕ್ಕೆ ಬರುವ ನಿಟ್ಟಿನಲ್ಲಿ ಅಮೆರಿಕದ ಜತೆ ಮಾತುಕತೆ ನಡೆಸಲಾಗುತ್ತಿದೆ. ಇತರ ಮೂರು ದೇಶಗಳ ಮೇಲೆ ಸುಂಕ ವಿಧಿಸುವ ನಿರ್ಧಾರವನ್ನು ಟ್ರಂಪ್ ಈಗಾಗಲೇ ಘೋಷಿಸಿದ್ದು, ಈಗಾಗಲೇ ಕೆಲವೊಂದು ಜಾರಿಗೆ ಬಂದಿವೆ ಎಂದು ಪ್ರತಿಪಾದಿಸಿದರು.
ಪ್ರತಿಯಾಗಿ ಸುಂಕ ವಿಧಿಸುವ ಕ್ರಮದ ಬಗ್ಗೆ ಎಐಎಂಐಎಂನ ಅಸದುದ್ದೀನ್ ಉವೈಸಿ, ಕಾಂಗ್ರೆಸ್ ನ ದೀಪೇಂದ್ರ ಹೂಡಾ ಮತ್ತು ಟಿಎಂಸಿಯ ಸಾಗರಿಕಾ ಘೋಷ್, ವಾಣಿಜ್ಯ ಕಾರ್ಯದರ್ಶಿಯವರನ್ನು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.
ಏಪ್ರಿಲ್ 2ರಿಂದ ಹೊಸ ಸುಂಕ ನೀತಿ ಜಾರಿಗೆ ಬರಲಿದೆ ಎಂದು ಟ್ರಂಪ್ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮುಂದಿಟ್ಟಿದ್ದರು. ತಕ್ಷಣಕ್ಕೆ ಭಾರತ ಈ ಕ್ರಮದಿಂದ ತಪ್ಪಿಸಿಕೊಳ್ಳಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಭರವಸೆ ನೀಡಿದರು ಎನ್ನಲಾಗಿದೆ.