ಕೋವಿಡ್ ಲಸಿಕೆಗಳು ಹಾಗೂ ಹೃದಯಾಘಾತದಿಂದ ಸಂಭವಿಸುತ್ತಿರುವ ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ: ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕೋವಿಡ್ ಲಸಿಕೆಗಳು ಮತ್ತು ಹೃದಯಾಘಾತದ ಹಠಾತ್ ಸಾವುಗಳ ನಡುವೆ ಯಾವುದೇ ನಿರ್ಣಾಯಕ ಸಂಬಂಧವಿಲ್ಲ ಎಂದು ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ವ್ಯಾಪಕ ಅಧ್ಯಯನಗಳು ತೋರಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ನಡೆದ ಸರಣಿ ಹಠಾತ್ ಸಾವುಗಳ ಹಿನ್ನೆಲೆಯಲ್ಲಿ, ಕೋವಿಡ್ ಲಸಿಕೆಗಳ ಕಡೆಗೆ ಬೊಟ್ಟು ಮಾಡಿದ್ದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು “ಸಾರ್ವಜನಿಕರಿಗೆ ಕೋವಿಡ್ ಲಸಿಕೆಯನ್ನು ನೀಡುವ ಬಗ್ಗೆ ಆತುರದ ಅನುಮೋದನೆ ಮತ್ತು ವಿತರಣೆ ಕೂಡ ಈ ಸಾವುಗಳಿಗೆ ಕಾರಣವಾಗಿರಬಹುದು” ಎಂದು ಶಂಕಿಸಿದ್ದರು. ಇದು ಕಾಂಗ್ರೆಸ್-ಬಿಜೆಪಿ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿತ್ತು.
ಕೋವಿಡ್ -19 ನಂತರದ ವರ್ಷಗಳಲ್ಲಿ ಯುವ ವಯಸ್ಕರಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತಗಳಿಗೆ ಕೋವಿಡ್ ಲಸಿಕೆಗಳೇ ಕಾರಣವಾಗಿರಬಹುದು ಎಂಬ ಅಭಿಪ್ರಾಯವು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ.
ಹಠಾತ್ ಸಾವುಗಳ ವಿಷಯವನ್ನು ದೇಶದಲ್ಲಿ ಹಲವಾರು ಸಂಸ್ಥೆಗಳ ಮೂಲಕ ತನಿಖೆ ಮಾಡಲಾಗಿದ್ದು, ಈ ಅಧ್ಯಯನಗಳು ಕೋವಿಡ್-19 ಲಸಿಕೆ ಮತ್ತು ಹಠಾತ್ ಸಾವುಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ನಿರ್ಣಾಯಕವಾಗಿ ಸ್ಥಾಪಿಸಿವೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿದ ಅಧ್ಯಯನಗಳು, ಭಾರತದಲ್ಲಿ ಕೋವಿಡ್-19 ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸುತ್ತವೆ, ಗಂಭೀರ ಅಡ್ಡಪರಿಣಾಮಗಳು ನಡೆದಿರುವ ಪ್ರಕರಣಗಳು ಅತ್ಯಂತ ಅಪರೂಪ ಎಂದು ಅದು ಹೇಳಿದೆ.
ಅದೇ ವೇಳೆ, ಅನುವಂಶೀಯತೆ, ಜೀವನಶೈಲಿ, ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಮತ್ತು ಕೋವಿಡ್ ನಂತರದ ತೊಡಕುಗಳು ಸೇರಿದಂತೆ ವಿವಿಧ ಅಂಶಗಳು ಹಠಾತ್ ಹೃದಯಾಘಾತದ ಸಾವುಗಳಿಗೆ ಕಾರಣವಾಗಬಹುದು ಎಂದೂ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಐಸಿಎಂಆರ್ ಮತ್ತು ಎನ್‌ಸಿಡಿಸಿ, ವಿಶೇಷವಾಗಿ 18 ರಿಂದ 45 ವರ್ಷ ವಯಸ್ಸಿನ ಯುವಜನರಲ್ಲಿ, ವಿವರಿಸಲಾಗದ ಹಠಾತ್ ಸಾವುಗಳ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಇದಕ್ಕಾಗಿ, ವಿಭಿನ್ನ ಸಂಶೋಧನಾ ವಿಧಾನಗಳನ್ನು ಬಳಸಿಕೊಂಡು ಎರಡು ಪೂರಕ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.