ದೇಶದ ಒಂದು ಲಕ್ಷಕ್ಕೂ ಅಧಿಕ ಏಕಶಿಕ್ಷಕ ಶಾಲೆಗಳಲ್ಲಿ 33 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು!
ಸಾಂದರ್ಭಿಕ ಚಿತ್ರ - Photo Credit: The Hindu
ಹೊಸದಿಲ್ಲಿ,ಅ.12: ಅಧಿಕೃತ ದತ್ತಾಂಶಗಳ ಪ್ರಕಾರ ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಏಕಶಿಕ್ಷಕ ಶಾಲೆಗಳಲ್ಲಿ 33 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದು, ಆಂಧ್ರಪ್ರದೇಶದಲ್ಲಿ ಇಂತಹ ಶಾಲೆಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿವೆ. ಉತ್ತರ ಪ್ರದೇಶವು ಏಕಶಿಕ್ಷಕ ಶಾಲೆಗಳಲ್ಲಿ ಅತ್ಯಂತ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಮುಂಚೂಣಿಯಲ್ಲಿದೆ.
ಶಿಕ್ಷಣ ಸಚಿವಾಲಯದ ಅಂಕಿಅಂಶಗಳಂತೆ 2024-25ನೇ ಶೈಕ್ಷಣಿಕ ವರ್ಷದಲ್ಲಿ ಭಾರತದಲ್ಲಿ ತಲಾ ಒಬ್ಬರೇ ಶಿಕ್ಷಕರು ನಡೆಸುತ್ತಿದ್ದ 1,04,125 ಶಾಲೆಗಳಿದ್ದು,ಪ್ರತಿ ಶಾಲೆಗೆ ಸರಾಸರಿ 34 ವಿದ್ಯಾರ್ಥಿಗಳಂತೆ ಈ ಶಾಲೆಗಳು 33,76,769 ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯವನ್ನು ಒದಗಿಸಿವೆ.
2009ರ ಶಿಕ್ಷಣ ಹಕ್ಕು ಕಾಯ್ದೆಯು ಪ್ರಾಥಮಿಕ ಮಟ್ಟದಲ್ಲಿ(1ರಿಂದ 4ರವರೆಗೆ ತರಗತಿಗಳು) 30:1 ಮತ್ತು ಉನ್ನತ ಪ್ರಾಥಮಿಕ ಮಟ್ಟದಲ್ಲಿ(6ರಿಂದ 8ರವರೆಗೆ ತರಗತಿಗಳು) 35:1 ವಿದ್ಯಾರ್ಥಿ-ಶಿಕ್ಷಕರ ಅನುಪಾತವನ್ನು ಕಡ್ಡಾಯಗೊಳಿಸಿದೆ.
ದೇಶದಲ್ಲಿ ಅತ್ಯಂತ ಹೆಚ್ಚಿನ ಏಕಶಿಕ್ಷಕ ಶಾಲೆಗಳು ಆಂಧ್ರಪ್ರದೇಶದಲ್ಲಿದ್ದು, ಉತ್ತರಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ,ಕರ್ನಾಟಕ ಮತ್ತು ಲಕ್ಷದ್ವೀಪ ನಂತರದ ಸ್ಥಾನಗಳಲ್ಲಿವೆ. ಆದರೆ ಒಬ್ಬರೇ ಶಿಕ್ಷಕರಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ವಿಷಯದಲ್ಲಿ ಉತ್ತರ ಪ್ರದೇಶವು ಅಗ್ರ ಸ್ಥಾನದಲ್ಲಿದ್ದು, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ನಂತರದ ಸ್ಥಾನಗಳಲ್ಲಿವೆ.
2022-23ರಲ್ಲಿ 1,18,190ರಷ್ಟಿದ್ದ ಏಕಶಿಕ್ಷಕ ಶಾಲೆಗಳ ಸಂಖ್ಯೆ 2023-24ರಲ್ಲಿ 1,10,971ಕ್ಕೆ ಇಳಿದಿದೆ(ಸುಮಾರು ಶೇ.6ರಷ್ಟು ಕುಸಿತ).
ಸಾಮಾನ್ಯವಾಗಿ ‘ಶಾಲೆಗಳ ತರ್ಕಬದ್ಧಗೊಳಿಸುವಿಕೆ’ ಎಂದು ಕರೆಯಲಾಗುವ ಶಾಲೆಗಳ ವಿಲೀನ ಮತ್ತು ಏಕೀಕರಣ ಪ್ರಕ್ರಿಯೆಯ ಮೂಲಕ ಕಲಿಕಾ ಫಲಿತಾಂಶಗಳನ್ನು ಸುಧಾರಿಸುವ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಸಾಧ್ಯವಿದ್ದಷ್ಟು ಉತ್ತಮವಾಗಿ ಬಳಸಿಕೊಳ್ಳುವ ಗುರಿಯನ್ನು ಸರಕಾರವು ಹೊಂದಿದೆ ಎಂದು ಹೇಳಿದ ಹಿರಿಯ ಅಧಿಕಾರಿಯೋರ್ವರು, ಏಕಶಿಕ್ಷಕ ಶಾಲೆಗಳು ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಹೀಗಾಗಿ ಶಿಕ್ಷಕರ ಹೆಚ್ಚಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳ ದಾಖಲಾತಿಯಿಲ್ಲದ ಶಾಲೆಗಳ ಶಿಕ್ಷಕರನ್ನು ಏಕಶಿಕ್ಷಕ ಶಾಲೆಗಳಿಗೆ ಮರುನಿಯೋಜಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.