ಬಿಹಾರ: ಚುನಾವಣೆಗೆ ಮುನ್ನ ಮತದಾರರ ಪಟ್ಟಿಗಳಿಂದ 16 ಲಕ್ಷಕ್ಕೂ ಅಧಿಕ ಹೆಸರುಗಳನ್ನು ಅಳಿಸಲಾಗಿದೆ!
Photo | Bihar Vidhan Sabha, Website
ಹೊಸದಿಲ್ಲಿ,ಅ.12: ಬಿಹಾರದ ಮತದಾರರ ಪಟ್ಟಿಗಳ ಇತ್ತೀಚಿನ ಪರಿಷ್ಕರಣೆಯ ಬಳಿಕ ಗಮನಾರ್ಹ ಅಳಿಸುವಿಕೆಗಳು ಮತ್ತು ಹೊಂದಾಣಿಕೆಗಳನ್ನು ಮಾಡಲಾಗಿದ್ದು,16,72,513 ಹೆಸರುಗಳನ್ನು ಕೈಬಿಡಲಾಗಿದೆ ಮತ್ತು 2020ಕ್ಕೆ ಹೋಲಿಸಿದರೆ ಮತದಾರರ ಸಂಖ್ಯೆಯಲ್ಲಿ ಒಟ್ಟಾರೆ ಶೇ.1.60ರಷ್ಟು ಏರಿಕೆಯಾಗಿದೆ.
ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಸೆ.30ರಂದು ಅಧಿಕೃತವಾಗಿ ಪ್ರಕಟಿಸಿದೆ. ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳು ಎತ್ತಿದ್ದ ಕಳವಳಗಳಿಗೆ ಸ್ಪಂದಿಸಿದ ಸರ್ವೋಚ್ಚ ನ್ಯಾಯಾಲಯವು ಅಳಿಸುವಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಈ ಹಿಂದೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶವು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಿತ್ತು. ಪರಿಣಾಮವಾಗಿ ಚುನಾವಣಾ ಆಯೋಗವು ಮತದಾರರು ತಮ್ಮ ಹೆಸರುಗಳನ್ನು ಅನ್ಯಾಯವಾಗಿ ತೆಗೆದುಹಾಕಲಾಗಿದೆ ಎಂದು ಭಾವಿಸಿದರೆ ಅವರು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು.
ಮತದಾರರ ಪಟ್ಟಿಗಳಲ್ಲಿ ಹೊಸ ಹೆಸರುಗಳನ್ನು ಸೇರಿಸಲು ಬಳಸಲಾಗುವ ಫಾರ್ಮ್ 6 ಮೂಲಕ ಒಟ್ಟು 30,98,228 ಹಕ್ಕುಕೋರಿಕೆಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ 28,95,191 (ಶೇ.93.4) ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಇದೇ ವೇಳೆ, ಅಸಿಂಧುವಾಗಿರಬಹುದಾದ ಹೆಸರುಗಳನ್ನು ಅಳಿಸಲು ಬಳಸಲಾಗುವ ಫಾರ್ಮ್ 7 ಮೂಲಕ 18,45,408 ಆಕ್ಷೇಪಣೆಗಳನ್ನು ಸಲ್ಲಿಸಲಾಗಿದ್ದು,ಈ ಪೈಕಿ 16,85,844(ಶೇ.91.3) ಅರ್ಜಿಗಳನ್ನು ಪುರಸ್ಕರಿಸಲಾಗಿದೆ.
ಪರಿಷ್ಕರಣೆಯ ಬಳಿಕ ಎಲ್ಲ 243 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳಲ್ಲಿ ಬದಲಾವಣೆಗಳಾಗಿವೆ. 14 ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಸಂಖ್ಯೆಗಳಲ್ಲಿ ಇಳಿಕೆಯಾಗಿದ್ದರೆ,ಇತರ 229 ಕ್ಷೇತ್ರಗಳಲ್ಲಿ ಹೆಚ್ಚಳವಾಗಿದೆ. ಮತದಾರರ ನಿಧನ,ಸ್ಥಳಾಂತರ ಮತ್ತು ಬಹುನೋಂದಣಿ ಇವು ಮತದಾರರ ಹೆಸರುಗಳ ಅಳಿಸುವಿಕೆಗೆ ಮೂರು ಕಾರಣಗಳಾಗಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಸಾವಿನ ಕಾರಣದಿಂದಾಗಿ 6,31,195,ಇತರ ಕಡೆಗಳಿಗೆ ಸ್ಥಳಾಂತರದಿಂದಾಗಿ 8,09,948 ಮತ್ತು ಬಹುನೋಂದಣಿಯ ಕಾರಣದಿಂದ 2,31,370 ಹೆಸರುಗಳನ್ನು ಅಳಿಸಲಾಗಿದೆ.
ಎಲ್ಲ 243 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದರಲ್ಲಿ ಸರಾಸರಿ 6,882.77 ಹೆಸರುಗಳನ್ನು ಅಳಿಸಲಾಗಿದೆ.
ಮಹಾಘಟಬಂಧನ್ ಹಿಡಿತದಲ್ಲಿರುವ ಕ್ಷೇತ್ರಗಳಲ್ಲಿ ಸರಾಸರಿ 6,660.36 ಆಗಿದ್ದರೆ ಜೆಡಿಯು ಶಾಸಕರಿರುವ ಕ್ಷೇತ್ರಗಳಲ್ಲಿ ಸರಾಸರಿ 7,130.95 ಆಗಿದೆ. 65 ವಿಧಾನಸಭಾ ಕ್ಷೇತ್ರಗಳಲ್ಲಿ ಅಳಿಸುವಿಕೆಗಳು ಹಿಂದಿನ ಚುನಾವಣೆಯಲ್ಲಿನ ಗೆಲುವಿನ ಅಂತರವನ್ನು ಮೀರಿವೆ.