×
Ad

ಫೆಲೆಸ್ತೀನ್ ಕುರಿತು ಭಾರತದ ದೀರ್ಘಕಾಲಿಕ ನಿಲುವು ಬದಲಾಗಿಲ್ಲ:ವಿದೇಶಾಂಗ ಕಾರ್ಯದರ್ಶಿ

Update: 2025-02-08 16:27 IST

 ವಿಕ್ರಮ ಮಿಸ್ರಿ | PTI 

ಹೊಸದಿಲ್ಲಿ: ಗಾಝಾದಿಂದ ಫೆಲೆಸ್ತೀನಿಗಳನ್ನು ತೆರವುಗೊಳಿಸಿದ ಬಳಿಕ ಅದನ್ನು ಅಮೆರಿಕವು ಸ್ವಾಧೀನಕ್ಕೆ ಪಡೆದುಕೊಂಡು ‘ಮಧ್ಯಪ್ರಾಚ್ಯದ ರಿವಿಯೆರಾ’ ಆಗಿ ಅಭಿವೃದ್ಧಿಗೊಳಿಸಬೇಕು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೂಚಿಸಿದ ಬಳಿಕ ಫೆಲೆಸ್ತೀನ್ ಕುರಿತು ಭಾರತದ ದೀರ್ಘಕಾಲಿಕ ನಿಲುವು ಬದಲಾಗಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಅವರು ಹೇಳಿದ್ದಾರೆ.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಗಾಝಾ ಪಟ್ಟಿಯಿಂದ ಫೆಲೆಸ್ತೀನಿಗಳನ್ನು ತೆರವುಗೊಳಿಸುವ ಟ್ರಂಪ್ ಪ್ರಸ್ತಾವದ ಕುರಿತು ಭಾರತದ ನಿಲುವು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಮಿಸ್ರಿ, ‘ಗಾಝಾ ಪಟ್ಟಿ ಕುರಿತಂತೆ ಫೆೆಲೆಸ್ತೀನ್ ವಿಷಯದಲ್ಲಿ ನಮ್ಮ ನಿಲುವು ಏನು ಎನ್ನುವುದು ನಿಮಗೆ ಗೊತ್ತಿದೆ. ಅದು ದೀರ್ಘಕಾಲಿಕ ನಿಲುವು ಮತ್ತು ಅದು ಬದಲಾಗಿಲ್ಲ’ ಎಂದು ಹೇಳಿದರು.

ಭಾರತದ ಫೆಲೆಸ್ತೀನ್ ನೀತಿಯು ಸುರಕ್ಷಿತ, ಮಾನ್ಯತೆ ಒಡೆದ ಗಡಿಗಳೊಂದಿಗೆ ಇಸ್ರೇಲ್‌ನೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಫೆಲೆಸ್ತೀನ್ ರಾಷ್ಟ್ರ ರಚನೆಯನ್ನು ಖಚಿತಪಡಿಸಲು ಮಾತುಕತೆಗಳ ಮೂಲಕ ದ್ವಿರಾಷ್ಟ್ರ ಪರಿಹಾರವನ್ನು ಪ್ರತಿಪಾದಿಸುತ್ತಿದೆ.

ವೀಕ್ಷಕರ ಪ್ರಕಾರ ಟ್ರಂಪ್ ಪ್ರಸ್ತಾವವು ದ್ವಿರಾಷ್ಟ್ರ ಪರಿಹಾರದ ಅಂತ್ಯವನ್ನು ಸೂಚಿಸುತ್ತದೆ.

ಈ ಹಿಂದೆ ದ್ವಿರಾಷ್ಟ್ರ ಪರಿಹಾರವನ್ನು ಸಾರ್ವಜನಿಕವಾಗಿ ವಿರೋಧಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಈ ಪ್ರಸ್ತಾವವನ್ನು ಮಂಡಿಸಿದ್ದರು.

ಗಾಝಾ ಪಟ್ಟಿಯನ್ನು ವಿಶ್ವಾದ್ಯಂತದಿಂದ ಜನರನ್ನು ಆಕರ್ಷಿಸುವ ರೆಸಾರ್ಟ್ ಆಗಿ ಪರಿವರ್ತಿಸುವುದನ್ನು ಮತ್ತು ಫೆಲೆಸ್ತೀನಿಗಳಿಗೆ ಈಜಿಪ್ಟ್ ಮತ್ತು ಜೋರ್ಡಾನ್‌ನಲ್ಲಿ ಪುನರ್ವಸತಿ ಕಲ್ಪಿಸುವುದನ್ನು ಟ್ರಂಪ್ ಪ್ರಸ್ತಾವಿಸಿದ್ದರು. ಅಮೆರಿಕವು ಗಾಝಾ ಪಟ್ಟಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ ಮತ್ತು ಅದನ್ನು ಅಭಿವೃದ್ಧಿಗೊಳಿಸುತ್ತದೆ ಎಂದು ಅವರು ಹೇಳಿದ್ದರು.

ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ನೆತನ್ಯಾಹು, ಇದು ಗಮನಯೋಗ್ಯ ವಿಷಯವಾಗಿದೆ ಎಂದು ಹೇಳಿದ್ದರು.

ಟ್ರಂಪ್ ಪ್ರಸ್ತಾವವು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕಾಗಿ ಮಧ್ಯಪ್ರಾಚ್ಯ ದೇಶಗಳಿಂದ ಮತ್ತೊಮ್ಮೆ ಕರೆಗಳನ್ನು ಪ್ರೇರೇಪಿಸಿದೆ.

ಅಮೆರಿಕದಿಂದ ಅತ್ಯಂತ ಹೆಚ್ಚಿನ ನೆರವು ಸ್ವೀಕರಿಸುವ ದೇಶಗಳಲ್ಲಿ ಒಂದಾಗಿರುವ ಈಜಿಪ್ಟ್ ಜ.19ರ ಕದನ ವಿರಾಮದ ಬಳಿಕ ಗಾಝಾ ಪುನರ್‌ನಿರ್ಮಾಣಕ್ಕೆ ಪ್ರಯತ್ನಗಳನ್ನು ಬೆಂಬಲಿಸಿದ ಸಂದರ್ಭದಲ್ಲಿ,ಫೆಲೆಸ್ತೀನಿಗಳನ್ನು ತಮ್ಮ ನೆಲದಿಂದ ಬಲವಂತದಿಂದ ತೆರವುಗೊಳಿಸಬಾರದು ಎಂದು ಸ್ಪಷ್ಟಪಡಿಸಿತ್ತು.

ಮುಂದಿನ ವಾರ ಟ್ರಂಪ್ ಜೊತೆಗೆ ತನ್ನ ಭೇಟಿಯ ಮುನ್ನ ಜೋರ್ಡಾನ್ ದೊರೆ ಅಬ್ದುಲ್ಲಾ ಅವರು ಗಾಝಾ ಪಟ್ಟಿ ಸ್ವಾಧೀನ ಅಥವಾ ಫೆಲೆಸ್ತೀನಿಗಳ ಸ್ಥಳಾಂತರದ ಯಾವುದೇ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.

ಅಕ್ಟೋಬರ್ 2023ರಲ್ಲಿ ಗಾಝಾ ಯುದ್ಧ ಆರಂಭಗೊಂಡಾಗಿನಿಂದ 45,000ಕ್ಕೂ ಅಧಿಕ ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದು,ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಅಧಿಕವಾಗಿದ್ದಾರೆ. ಒಂದು ಲಕ್ಷ ಜನರು ಪ್ರದೇಶವನ್ನು ತೊರೆಯುವುದರೊಂದಿಗೆ ಗಾಝಾದ ಜನಸಂಖ್ಯೆಯು ಶೇ.6ರಷ್ಟು ಕುಸಿದಿದೆ ಎಂದು ಫೆಲೆಸ್ತೀನಿ ಮೂಲಗಳು ಅಂದಾಜಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News