×
Ad

ಆಸ್ತಿ ವಿವಾದ: ಪ. ಬಂಗಾಳದಲ್ಲಿ ಟಿಎಂಸಿ- ಬಿಜೆಪಿ ಸಂಘರ್ಷ

Update: 2024-04-08 08:36 IST

Photo: screenshot/twitter.com/jawharsircar

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣಾ ಜಿಲ್ಲೆಯ ಠಾಕೂರ್ ನಗರದಲ್ಲಿ ಭಾನುವಾರ ರಾತ್ರಿ ಕೇಂದ್ರ ಸಚಿವ ಮತ್ತು ಬನ್ ಗಾಂವ್ ಸಂಸದ ಶಂತನು ಠಾಕೂರ್ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬಾಳಾ ಠಾಕೂರ್ ಗುಂಪಿನ ನಡುವೆ ಮುಖಾಮುಖಿ ಸಂಘರ್ಷ ಏರ್ಪಟ್ಟಿದೆ.

ಮಟುವಾ ಸಮುದಾಯದ ಪ್ರಾಬಲ್ಯ ಇರುವ ಈ ಪ್ರದೇಶದಲ್ಲಿ ಸಮುದಾಯದ ನಾಯಕಿ 'ಬೊರೊಮಾ' ಎಂದೇ ಜನಪ್ರಿಯರಾಗಿದ್ದ ಬೀಣಾಪಾಣಿ ದೇವಿ ಐದು ವರ್ಷದ ಹಿಂದಿನವರೆಗೂ ತಮ್ಮ ಜೀವನ ಕಳೆದಿದ್ದ ಮನೆಯನ್ನು ವಶಕ್ಕೆ ಪಡೆಯುವ ಪ್ರಯತ್ನಕ್ಕೆ ಉಭಯ ಗುಂಪುಗಳು ಮುಂದಾದದ್ದು ಸಂಘರ್ಷಕ್ಕೆ ಕಾರಣವೆನ್ನಲಾಗಿದೆ.

ಪ್ರಸ್ತುತ ಮಮತಾ ಬಾಳಾ ವಾಸಿಸುತ್ತಿರುವ ಬೊರೊಮಾ ನಿವಾಸವನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಬೆಂಬಲಿಗರೊಂದಿಗೆ ಶಂತನು ಠಾಕೂರ್ ಮುಂದಾದ ಸಂದರ್ಭದಲ್ಲಿ ಸಂಘರ್ಷ ಏರ್ಪಟ್ಟಿದೆ ಎಂದು ಟಿಎಂಸಿ ಆಪಾದಿಸಿದೆ.

ಇಡೀ ಆಸ್ತಿಯನ್ನು ಮಮತಾ ಬಾಳಾ ಅಕ್ರಮವಾಗಿ ಸ್ವಾಧೀನ ಮಾಡಿಕೊಂಡಿದ್ದಾರೆ ಎನ್ನುವುದು ಬಿಜೆಪಿ ಸಂಸದರ ಆರೋಪ. ಶಂತನು ಠಾಕೂರ್, ಬೀಣಾಪಾಣಿ ದೇವಿಯ ಮೊಮ್ಮಗ ಹಾಗೂ ಮಮತಾ ಅವರು ಬಾಳಾ ಠಾಕೂರ್ ಸೊಸೆ.

"ಬಿಜೆಪಿಯ ಗೂಂಡಾಗಿರಿ ಉತ್ತುಂಗದಲ್ಲಿದೆ. ಬೊನಗಾಂವ್ನಿಂದ ಆಘಾತಕಾರಿ ವಿಡಿಯೊಗಳು ಬರುತ್ತಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ಮುಖಂಡ ತಮ್ಮ ಗೂಂಡಾಗಳ ಜತೆಗೆ ಹರಿತವಾದ ಆಯುಧಗಳೊಂದಿಗೆ ರಾಜ್ಯಸಭಾ ಸದಸ್ಯೆ ಮಮತಾ ಠಾಕೂರ್ ಅವರ ಮನೆಯ ಮೇಲೆ ಹಿಂಸಾತ್ಮಕ ದಾಳಿಗೆ ಪ್ರಯತ್ನಿಸುತ್ತಿದ್ದಾರೆ" ಎಂದು ಟಿಎಂಸಿ ಎಕ್ಸ್ ಪೋಸ್ಟ್ ನಲ್ಲಿ ವಿಡಿಯೊ ಸಹಿತ ವಿವರಿಸಿದೆ.

ಈ ವಿಡಿಯೊದಲ್ಲಿ ಶಂತನು ಠಾಕೂರ್ ಹಾಗೂ ಅವರ ಬೆಂಬಲಿಗರು ಮನೆಯ ಗೇಟುಗಳನ್ನು ಮುರಿಯವ ದೃಶ್ಯ ಕಾಣಿಸುತ್ತಿದೆ.

ಈ ಆಸ್ತಿಯ ಕಾನೂನುಬದ್ಧ ಹಕ್ಕುದಾರರಲ್ಲಿ ತಾವು ಒಬ್ಬರಾಗಿದ್ದರೂ, ಮಮತಾ ಬಾಳಾ ಠಾಕೂರ್ ಕಾನೂನುಬಾಹಿರವಾಗಿ ಇಡೀ ಆಸ್ತಿಯನ್ನು ಅತಿಕ್ರಮಿಸಿಕೊಂಡಿದ್ದಾರೆ. ಇದರ ಒಂದು ಭಾಗವನ್ನು ಟಿಎಂಸಿ ಪಕ್ಷದ ಕಚೇರಿಯಾಗಿ ಬಳಸಿಕೊಂಡಿದ್ದಾರೆ ಎನ್ನುವುದು ಶಂತನು ಅವರ ಆರೋಪ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News