ಸಿಕಂದರಾಬಾದ್| ವಿಗ್ರಹ ಧ್ವಂಸ ಖಂಡಿಸಿ ಪ್ರತಿಭಟನೆ; ಬಿಜೆಪಿ ನಾಯಕಿ ಮಾಧವಿ ಲತಾ ಪೊಲೀಸ್ ವಶಕ್ಕೆ
Photo credit: India Today
ಸಿಕಂದರಾಬಾದ್: ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಸೋಮವಾರ ಮುಂಜಾನೆ ದೇವಸ್ಥಾನವನ್ನು ಧ್ವಂಸಗೊಳಿಸಿದ ನಂತರ ಉದ್ವಿಗ್ನತೆ ಉಂಟಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸಿಕಂದರಾಬಾದ್‌ನ ಮುತ್ಯಾಲಮ್ಮ ದೇವಸ್ಥಾನದಲ್ಲಿರುವ ದುರ್ಗಾ ದೇವಿಯ ವಿಗ್ರಹವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಸ್ಥಳೀಯರು ಒಬ್ಬ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ನಂತರ, ಭದ್ರತೆಯನ್ನು ಹೆಚ್ಚಿಸಲಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಮುಖಂಡರೂ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಸಂಬಂಧ ಬಿಜೆಪಿಯ ಮಾಧವಿ ಲತಾ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆಯಲಾಗಿದೆ.
ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಸಂವಾದ ನಡೆಸಿದರು. ಇದೊಂದು ನಾಚಿಕೆಗೇಡಿನ ಘಟನೆ ಎಂದಿರುವ ಅವರು, ಕೆಲವರು ಉದ್ದೇಶಪೂರ್ವಕವಾಗಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹೈದರಾಬಾದ್‌ನ ವಿವಿಧೆಡೆ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ, ಕೆಲವರು ಹೈದರಾಬಾದ್‌ನಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಮತ್ತು ಹೈದರಾಬಾದ್‌ನಲ್ಲಿ ಕೋಮುಗಲಭೆಗಳನ್ನು ಹೆಚ್ಚಿಸಲು ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಅಕ್ಟೋಬರ್ 12 ರಂದು ಹೈದರಾಬಾದ್‌ನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಹೈದರಾಬಾದ್‌ನ ಬೇಗಂ ಬಜಾರ್‌ನ ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಪೂಜಾ ಮಂಟಪದಲ್ಲಿ ದುರ್ಗಾ ಮಾತೆಯ ವಿಗ್ರಹಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಒಬ್ಬನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ವ್ಯಕ್ತಿಯು ಹಸಿವಿನಿಂದ ಬಳಲುತ್ತಿದ್ದ ನಿರಾಶ್ರಿತ ವ್ಯಕ್ತಿಯಾಗಿದ್ದು, ಆಹಾರಕ್ಕಾಗಿ ಹುಡುಕುತ್ತಿರುವಾಗ ಪ್ರಸಾದಕ್ಕೆ ಅಡ್ಡಿಪಡಿಸಿ ವಿಗ್ರಹಕ್ಕೆ ಹಾನಿ ಮಾಡಿದ್ದಾನೆ ಎನ್ನಲಾಗಿದೆ.