ಉತ್ತರಪ್ರದೇಶ | ಗುಂಪಿನಿಂದ ದಲಿತನ ಥಳಿಸಿ ಹತ್ಯೆ; ಇನ್ನೂ 4 ಬಂಧನ
Photo Credit : NDTV
ರಾಯ್ ಬರೇಲಿ, ಅ. 8: ಉತ್ತರಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಉಂಚಹಾರ್ ಎಂಬಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಕೊಂದ ಪ್ರಕರಣದಲ್ಲಿ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ. ಈ ವ್ಯಕ್ತಿಯನ್ನು ಕಳ್ಳ ಎಂಬುದಾಗಿ ಭಾವಿಸಿ ಗ್ರಾಮಸ್ಥರು ಹೊಡೆದು ಕೊಂದರು ಎಂದು ಹೇಳಲಾಗಿದೆ.
ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಗೆ ಜಾತಿ ಆಧಾರಿತ ವಿವರಣೆ ನೀಡುವುದರ ವಿರುದ್ಧವೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆರೋಪಿಗಳಿಗೆ ಸಂತ್ರಸ್ತನ ಜಾತಿ ತಿಳಿದಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
‘‘ಪ್ರಮುಖ ಆರೋಪಿ ಶಿವಮ್, ಅವನ ಸಂಬಂಧಿಕ ಶಿವಪ್ರಸಾದ್ ಅಗ್ರಹಾರಿ ಮತ್ತು ಇತರ ಇಬ್ಬರನ್ನು ಮಂಗಳವಾರ ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 9ಕ್ಕೆ ಏರಿದೆ’’ ಎಂದು ರಾಯ್ ಬರೇಲಿ ಪೊಲೀಸ್ ಸೂಪರಿಂಟೆಂಡೆಂಟ್ ಯಶ್ವೀರ್ ಸಿಂಗ್ ಹೇಳಿದರು.
ಮನೆಗಳಿಂದ ವಸ್ತುಗಳನ್ನು ಕದಿಯಲು ತಂಡವೊಂದು ಡ್ರೋನ್ ಗಳನ್ನು ಬಳಸುತ್ತಿದೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ರಾತ್ರಿ ಕಾವಲು ನಡೆಸುತ್ತಿದ್ದ ಗ್ರಾಮಸ್ಥರ ಗುಂಪೊಂದು ಮುಂಜಾನೆ ಒಂದು ಗಂಟೆಗೆ 40 ವರ್ಷದ ಹರಿಓಮ್ ವಾಲ್ಮೀಕಿ ಎಂಬವರನ್ನು ಹೊಡೆದು ಕೊಂದಿತ್ತು.
ಐವರು ಆರೋಪಿಗಳನ್ನು ಘಟನೆ ನಡೆದ ತಕ್ಷಣವೇ ಬಂಧಿಸಲಾಗಿತ್ತು.
*ಗುಂಪು ನ್ಯಾಯ ಆಳುತ್ತಿದೆ: ಕಾಂಗ್ರೆಸ್
ಗುಂಪು ಸೇರಿ ಜನರನ್ನು ಹೊಡೆದು ಕೊಲ್ಲುವುದು, ಬುಲ್ ಡೋಝರ್‌ನಿಂದ ಮನೆಗಳನ್ನು ಅನ್ಯಾಯವಾಗಿ ಕೆಡಹುವುದು, ಗುಂಪು ನ್ಯಾಯ ನಮ್ಮ ಕಾಲದ ಭಯಾನಕ ಲಕ್ಷಣಗಳಾಗಿ ಬಿಟ್ಟಿವೆ ಎಂದು ಜಂಟಿ ಹೇಳಿಕೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.