×
Ad

ಇತರೆ ಹಿಂದುಳಿದ ವರ್ಗಗಳ ಕುಶಲಕರ್ಮಿಗಳ ನಿರ್ಲಕ್ಷ್ಯ; ಜವಳಿ ವಲಯದಲ್ಲಿ ಯಶಸ್ಸು ಸಾಧಿಸುವಲ್ಲಿ ವಿಫಲ: ರಾಹುಲ್ ಗಾಂಧಿ ಕಳವಳ

Update: 2025-04-12 19:25 IST

ರಾಹುಲ್ ಗಾಂಧಿ | PTI

ಹೊಸದಿಲ್ಲಿ: ಜವಳಿ ವಲಯದಲ್ಲಿ ಇತರೆ ಹಿಂದುಳಿದ ವರ್ಗಗಳ ಕುಶಲಕರ್ಮಿಗಳು ದೊಡ್ಡ ಸಾಧನೆ ಮಾಡುವಲ್ಲಿ ವಿಫಲರಾಗಿದ್ದು, ನಾನು ಈ ನಿರ್ಲಕ್ಷ್ಯ ಹಾಗೂ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ವಸ್ತ್ರವಿನ್ಯಾಸ ವಲಯದಲ್ಲಿ ತನ್ನದೇ ಸ್ಥಾನ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಜವಳಿ ಕುಶಲಕರ್ಮಿಯೊಬ್ಬರ ಕಾರ್ಯಾಗಾರಕ್ಕೆ ತಾವು ಇತ್ತೀಚೆಗೆ ನೀಡಿದ್ದ ಭೇಟಿಯ ವಿಡಿಯೊವನ್ನು ಅದರೊಂದಿಗೆ ಹಂಚಿಕೊಂಡಿದ್ದಾರೆ.

ಈ ವೇಳೆ ಕುಶಲಕರ್ಮಿಗಳನ್ನು ಭೇಟಿ ಮಾಡಿರುವ ರಾಹುಲ್ ಗಾಂಧಿ, ಜವಳಿ ಕೆಲಸದಲ್ಲಿ ತಾವೂ ಅವರೊಂದಿಗೆ ತಮ್ಮ ಕೈಜೋಡಿಸಿದ್ದಾರೆ.

“ನಾನು ಇದುವರೆಗೆ ವಸ್ತ್ರವಿನ್ಯಾಸ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಒಬ್ಬನನ್ನೂ ಭೇಟಿಯಾಗಿಲ್ಲ ಎಂದು ತಮ್ಮದೇ ಕೌಶಲವನ್ನು ಆಧರಿಸಿ ತಮ್ಮ ಉದ್ಯಮವನ್ನು ಸ್ಥಾಪಿಸಿರುವ ವಿಕ್ಕಿ ಎಂಬ ಯುವಕ ನನಗೆ ಹೇಳಿದರು. ಈ ಕುಶಲಕರ್ಮಿಯು ತನ್ನ ಕಾರ್ಖಾನೆಯಲ್ಲಿ ದಿನಕ್ಕೆ 12 ಗಂಟೆಗಳ ಕಾಲ ಕಠಿಣ ಪರಿಶ್ರರಮ ಪಡುತ್ತಾ, ಸೂಜಿ ಹಾಗೂ ದಾರದೊಂದಿಗೆ ತಮ್ಮ ನೇಯ್ಗೆಯ ಪವಾಡದಲ್ಲಿ ತೊಡಗಿದ್ದಾರೆ. ಹೀಗಿದ್ದೂ, ಪರಿಸ್ಥಿತಿ ಮೊದಲಿನಂತೆಯೇ ಇದ್ದು, ಅವರ ಕೌಶಲಕ್ಕೆ ಯಾವುದೇ ಪ್ರಶಂಸೆ ದೊರೆಯುತ್ತಿಲ್ಲ” ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತರ ಉದ್ಯಮಗಳಂತೆಯೆ, ಬಹುಜನರಿಗೆ ಜವಳಿ ಹಾಗೂ ವಸ್ತ್ರ ವಿನ್ಯಾಸ ಉದ್ಯಮದಲ್ಲಿ ಪ್ರಾತಿನಿಧ್ಯವೂ ಇಲ್ಲ ಅಥವಾ ಶಿಕ್ಷಣಾವಕಾಶ ಅಥವಾ ಜವಳಿ ಉದ್ಯಮದ ಜಾಲದಲ್ಲಿ ಸ್ಥಾನವೂ ದೊರೆಯುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.

“ನಾನು ವಿಕ್ಕಿಯಂತಹ ಪ್ರತಿಭಾವಂತ ಜನರನ್ನು ಭೇಟಿ ಮಾಡಿದಾಗ, ಭಾರತೀಯ ಯುವಕರ ನೈಜ ಪ್ರತಿಭೆಯನ್ನು ವಿಶ್ವ ನೋಡುವಂತಾಗಲಿ ಎಂದು ನಾನು ಅವರ ಕೆಲಸವನ್ನು ಕಲಿಯಲು ಪ್ರಯತ್ನಿಸುತ್ತೇನೆ. ಸಾಮರ್ಥ್ಯ ಹಾಗೂ ಕಠಿಣ ಪರಿಶ್ರತಮವಿದ್ದಾಗಿಯೂ, ಇಂತಹ ಅಭಿಮನ್ಯುವಿನಂತಹ ಯುವಕರು ನಿರ್ಲಕ್ಷ್ಯ ಹಾಗೂ ಅನ್ಯಾಯದ ವಿಷವರ್ತುಲದಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿಯಬೇಕಿದೆ” ಎಂದು ಅವರು ಬರೆದುಕೊಂಡಿದ್ದಾರೆ.

“ನನ್ನ ಈ ಹೋರಾಟವು ಈ ವಿಷವರ್ತುಲವನ್ನು ತುಂಡರಿಸಬೇಕು ಹಾಗೂ ಪ್ರತಿ ಕುಶಲಕರ್ಮಿ ಯುವಕರೂ ವ್ಯವಸ್ಥೆಯೊಳಕ್ಕೆ ಪ್ರವೇಶಿಸಲು ದಾರಿಯೊಂದನ್ನು ಕಂಡುಕೊಳ್ಳಬೇಕು ಎಂಬ ಕಾರಣಕ್ಕಾಗಿ ಆಗಿದೆ”, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News