ಬ್ರಿಟಿಶ್ ಪೌರತ್ವ: ರಾಹುಲ್ ಗಾಂಧಿ ವಿರುದ್ಧ ಹೊಸದಾಗಿ ವಿಚಾರಣೆಗೆ ಹೈಕೋರ್ಟ್ ಗೆ ಮನವಿ
ರಾಹುಲ್ ಗಾಂಧಿ | PC : PTI
ಲಕ್ನೋ: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯ ಬ್ರಿಟಿಶ್ ಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೊಸದಾಗಿ ನಡೆಸುವಂತೆ ಕೋರಿ ಅರ್ಜಿದಾರ ಎಸ್. ವಿಘ್ನೇಶ್ ಶಿಶಿರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರು ತನ್ನ ಮರುಪರಿಶೀಲನಾ ಅರ್ಜಿಯಲ್ಲಿ, ಈ ವಿಚಾರಣೆಯಲ್ಲಿ ಹೊಸ ವಿಷಯಗಳನ್ನು ಸೇರ್ಪಡೆಗೊಳಿಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ.
ಅವರು ಲಂಡನ್, ವಿಯೆಟ್ನಾಮ್ ಮತ್ತು ಉಝ್ಬೆಕಿಸ್ತಾನ್ ಗಳಿಂದ ಪಡೆದುಕೊಂಡಿರುವರೆನ್ನಲಾದ ವೀಡಿಯೊಗಳು ಮತ್ತು ದಾಖಲೆಗಳನ್ನು ತನ್ನ ಅರ್ಜಿಯ ಜೊತೆಗೆ ಸಲ್ಲಿಸಿದ್ದಾರೆ.
ಹೈಕೋರ್ಟ್ 2025 ಮೇ 14ರಂದು, ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಆಗ ಗೃಹ ವ್ಯವಹಾರಗಳ ಸಚಿವಾಲಯದ ಪೌರತ್ವ ಇಲಾಖೆಯು, ರಾಹುಲ್ ಗಾಂಧಿಯ ಪೌರತ್ವ ಮತ್ತು ಪಾಸ್‌ಪೋರ್ಟ್ ಬಗ್ಗೆ ವಿವರಗಳನ್ನು ಕೋರಿ ಭಾರತೀಯ ರಾಯಭಾರ ಕಚೇರಿಯ ಮೂಲಕ ಬ್ರಿಟಿಶ್ ಸರಕಾರಕ್ಕೆ ಔಪಚಾರಿಕ ಮನವಿ ಕಳುಹಿಸಿತ್ತು.
ಇದಕ್ಕೆ ಪ್ರತಿಯಾಗಿ, ಬ್ರಿಟನ್ ರಾಹುಲ್ ಗಾಂಧಿಯ ಪೌರತ್ವ ಕುರಿತ ಮಾಹಿತಿಯನ್ನು ಭಾರತಕ್ಕೆ ನೀಡಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಈ ಪ್ರಕರಣದ ವಿಚಾರಣೆಯನ್ನು ಪ್ರಸಕ್ತ ಹೊಸದಿಲ್ಲಿಯಲ್ಲಿರುವ ಸಿಬಿಐ ಭ್ರಷ್ಟಾಚಾರ ನಿಗ್ರಹ ಶಾಖೆ-2 ನಡೆಸುತ್ತಿದೆ.
ತನ್ನ ಸಾಂವಿಧಾನಿಕ ಪ್ರಮಾಣವಚನವನ್ನು ಉಲ್ಲಂಘಿಸಿರುವ ಮತ್ತು ವಿದೇಶಿ ಪೌರತ್ವ ಕುರಿತ ಮಾಹಿತಿಯನ್ನು ಬಚ್ಚಿಟ್ಟು ಚುನಾವಣಾ ಆಯೋಗಕ್ಕೆ ದಾರಿತಪ್ಪಿಸುವ ವಿವರಗಳನ್ನು ನೀಡಿರುವ ಆರೋಪವನ್ನು ರಾಹುಲ್ ಗಾಂಧಿ ಎದುರಿಸುತ್ತಿದ್ದಾರೆ.