×
Ad

ಎಸ್ಐಆರ್ ‘ಮತಗಳ್ಳತನ’ದ ಹೊಸ ಅಸ್ತ್ರ:ರಾಹುಲ್ ಗಾಂಧಿ ಆರೋಪ

Update: 2025-08-18 21:42 IST

ರಾಹುಲ್ ಗಾಂಧಿ | PTI

ಔರಂಗಾಬಾದ್(ಬಿಹಾರ),ಆ.18: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ‘ಮತಗಳ್ಳತನ’ದ ನೂತನ ಅಸ್ತ್ರವಾಗಿದೆ ಎಂದು ಸೋಮವಾರ ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,‘ಒಬ್ಬ ವ್ಯಕ್ತಿ, ಒಂದು ಮತ’ ತತ್ವವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಸೋಮವಾರ ತನ್ನ ವಾಟ್ಸ್ಆ್ಯಪ್ ಚಾನೆಲ್ ನಲ್ಲಿ ಈ ಹೇಳಿಕೆ ನೀಡಿರುವ ರಾಹುಲ್ ಬಿಹಾರದ ಲೋಕಸಭಾ ಚುನಾವಣೆಯಲ್ಲಿ ಮತಗಳನ್ನು ಚಲಾಯಿಸಿದ್ದ,ಆದರೆ ಎಸ್ಐಆರ್ ಬಳಿಕ ಮತದಾರರ ಪಟ್ಟಿಗಳಿಂದ ಕೈಬಿಡಲ್ಪಟ್ಟವರ ಪೋಟೊವನ್ನೂ ಪೋಸ್ಟ್ ಮಾಡಿದ್ದಾರೆ.

ರವಿವಾರ ಸಾಸಾರಾಮ್ನಲ್ಲಿ ಬಿಹಾರದ 20 ಜಿಲ್ಲೆಗಳಲ್ಲಿ ಸಾಗಲಿರುವ 16 ದಿನಗಳ ತನ್ನ ಮತದಾರರ ಅಧಿಕಾರ ಯಾತ್ರೆಯನ್ನು ಆರಂಭಿಸಿದ ಸಂದರ್ಭದಲ್ಲಿ ರಾಹುಲ್ ಈ ಗುಂಪನ್ನು ಭೇಟಿಯಾಗಿದ್ದರು.

‘‘ಎಸ್ಐಆರ್ ಮತಗಳ್ಳತನದ ನೂತನ ಅಸ್ತ್ರವಾಗಿದೆ. ಕಾಕತಾಳೀಯವೆಂಬಂತೆ ಈ ಚಿತ್ರದಲ್ಲಿ ನನ್ನೊಂದಿಗೆ ನಿಂತಿರುವವರು ಈ ಕಳ್ಳತನಕ್ಕೆ ‘ಜೀವಂತ’ ಪುರಾವೆಯಾಗಿದ್ದಾರೆ. ಅವರೆಲ್ಲರೂ 2024ರ ಲೋಕಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದರು. ಆದರೆ ಬಿಹಾರ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವ ಸಮಯದಲ್ಲಿ ಅವರ ಗುರುತು,ಅವರ ಅಸ್ತಿತ್ವ ಭಾರತದ ಪ್ರಜಾಪ್ರಭುತ್ವದಿಂದ ಅಳಿಸಿಹೋಗಿದೆ ’’ಎಂದು ರಾಹುಲ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಈ ಫೋಟೊದಲ್ಲಿರುವವರು ಯಾರು ಗೊತ್ತೇ? ರೈತ ಮತ್ತು ನಿವೃತ್ತ ಯೋಧ ರಾಜಮೋಹನ ಸಿಂಗ್(70),ದಲಿತ ಸಮುದಾಯದ ಕಾರ್ಮಿಕ ಮಹಿಳೆ ಉಮ್ರಾವತಿ ದೇವಿ(35),ಹಿಂದುಳಿದ ವರ್ಗಕ್ಕೆ ಸೇರಿದ ಕಾರ್ಮಿಕ ಧನಂಜಯ ಕುಮಾರ ಬಿಂದ್(30),ಈ ಹಿಂದೆ ನರೇಗಾದಡಿ ಕೆಲಸ ಮಾಡುತ್ತಿದ್ದ ಸೀತಾದೇವಿ(45),ಹಿಂದುಳಿದ ವರ್ಗಕ್ಕೆ ಸೇರಿದ ಕೂಲಿ ಕೆಲಸ ಮಾಡುವ ರಾಜು ದೇವಿ(55), ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರ್ಮಿಕ ಮುಹಮ್ಮುದ್ದೀನ್ ಅನ್ಸಾರಿ(52) ಎಂದು ರಾಹುಲ್ ಬರೆದಿದ್ದಾರೆ.

‘‘ಅವರು ‘ಬಹುಜನ’ ಮತ್ತು ಬಡವರಾಗಿದ್ದಕ್ಕೆ ಬಿಜೆಪಿಯು ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಅವರನ್ನು ಶಿಕ್ಷಿಸುತ್ತಿದೆ. ನಮ್ಮ ಯೋಧರನ್ನೂ ಬಿಟ್ಟಿಲ್ಲ. ಅವರಿಗೆ ಮತದಾನ ಮಾಡುವ ಹಕ್ಕು ಮತ್ತು ಗುರುತು ಇಲ್ಲ ’’ ಎಂದು ಹೇಳಿರುವ ರಾಹುಲ್,ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಪರಿಸ್ಥಿತಿಗಳಿಂದಾಗಿ ಅವರಿಗೆ ವ್ಯವಸ್ಥೆಯ ಪಿತೂರಿಯ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ. ಅವರ ‘ಒಬ್ಬ ವ್ಯಕ್ತಿ,ಒಂದು ಮತ’ದ ಮೂಲಭೂತ ಹಕ್ಕನ್ನು ರಕ್ಷಿಸಲು ನಾವಿಲ್ಲಿ ಅವರ ಜೊತೆಯಲ್ಲಿದ್ದೇವೆ ’’ ಎಂದಿದ್ದಾರೆ.

‘ಇದು ಹಕ್ಕುಗಳ ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯ ಪ್ರಶ್ನೆಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಅದನ್ನು ಅಂತ್ಯಗೊಳಿಸಲು ನಾವು ಬಿಡುವುದಿಲ್ಲ’ ಎಂದೂ ರಾಹುಲ್ ಹೇಳಿದ್ದಾರೆ.

ಈ ನಡುವೆ ಮತದಾರರ ಅಧಿಕಾರ ಯಾತ್ರೆ ಸೋಮವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು,ರಾಹುಲ್,ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ವಿಕಾಸಶೀಲ ಇನ್ಸಾನ್ ಪಾರ್ಟಿಯ ಮುಕೇಶ್ ಸಾಹನಿ ಅವರು ಇಲ್ಲಿಯ ದೇವಕುಂಡ ಸೂರ್ಯ ಮಂದಿರದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News