ಮತದಾರ ಅಧಿಕಾರ ಯಾತ್ರೆ ವೇಳೆ ದ್ವಿಚಕ್ರ ವಾಹನ ಕಳೆದುಕೊಂಡಿದ್ದ ಯುವಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : ANI
ಪಾಟ್ನಾ : ಮತದಾರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಬೈಕ್ ಕಳೆದುಕೊಂಡಿದ್ದ ಬಿಹಾರದ ದರ್ಭಾಂಗಾ ಜಿಲ್ಲೆಯ ಯುವಕನೋರ್ವನಿಗೆ ರಾಹುಲ್ ಗಾಂಧಿ ಹೊಸ ಬೈಕ್ ಅನ್ನು ಉಡುಗೊರೆಯಾಗಿ ನೀಡಿದರು.
ಶುಭಂ ಸೌರಭ್ ಅವರು ಬೈಕ್ ಕಳೆದುಕೊಂಡ ಬಗ್ಗೆ ಹೇಳಿರುವ ವೀಡಿಯೊವನ್ನು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ವೀಡಿಯೊದಲ್ಲಿ ಶುಭಂ ಸೌರಭ್ ಬೈಕ್ ಕೀಯನ್ನು ಪ್ರದರ್ಶಿಸುತ್ತಿರುವುದು ಕಂಡು ಬಂದಿದೆ.
ರಾಹುಲ್ ಗಾಂಧಿ ದರ್ಭಾಂಗಾದಲ್ಲಿ ಬೈಕ್ ರ್ಯಾಲಿ ನಡೆಸುತ್ತಿದ್ದಾಗ, ನಾನು ನನ್ನ ಬೈಕ್ ಅನ್ನು ಅವರೊಂದಿಗೆ ಬಂದ ಭದ್ರತಾ ಸಿಬ್ಬಂದಿಗೆ ನೀಡಿದ್ದೆ. ಆ ಬಳಿಕ ನನ್ನ ಬೈಕ್ ನನಗೆ ಸಿಕ್ಕಿರಲಿಲ್ಲ. ಬೈಕ್ ಕಳೆದುಹೋದ ಬಳಿಕ ನಾನು ಬೇಸರಗೊಂಡಿದ್ದೆ. ಎರಡು ದಿನಗಳ ಹಿಂದೆ ಅಪರಿಚಿತರೋರ್ವರು ಕರೆ ಮಾಡಿ ರಾಹುಲ್ ಗಾಂಧಿ ನಿಮಗೆ ಹೊಸ ಬೈಕ್ ಉಡುಗೊರೆಯಾಗಿ ನೀಡಲು ಬಯಸಿದ್ದಾರೆ ಎಂದು ಹೇಳಿದ್ದರು. ಆರಂಭದಲ್ಲಿ ಇದನ್ನು ನಂಬಲು ಸಾಧ್ಯವಾಗಿರಲಿಲ್ಲ. ಆ ಬಳಿಕ ನಾವು ಪಾಟ್ನಾಗೆ ತೆರಳಿದೆವು. ಗಾಂಧಿ ಮೈದಾನಕ್ಕೆ ಹೋಗುವ ದಾರಿಯಲ್ಲಿ ರಾಹುಲ್ ನಮಗೆ ಬೈಕ್ ಕೀಯನ್ನು ಹಸ್ತಾಂತರಿಸಿದರು. ನಾನು ಕಳೆದುಕೊಂಡ ಮಾದರಿಯ ಹೊಸ ಬೈಕ್ ನನಗೆ ನೀಡಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. ರಾಹುಲ್ ಗಾಂಧಿಯ ಈ ಹೃದಯವಂತಿಕೆಯಿಂದ ನಾನು ಭಾವುಕನಾಗಿದ್ದೇನೆ ಎಂದು ಸೌರಭ್ ಹೇಳಿದ್ದಾರೆ.