×
Ad

ಅವಕಾಶ ನೀಡಿದರೆ ಬಿಜೆಪಿಯ ಉನ್ನತ ನಾಯಕರ ಬೆಂಬಲ ಕೋರುತ್ತೇನೆ : ಇಂಡಿಯಾ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಸುದರ್ಶನ್ ರೆಡ್ಡಿ

Update: 2025-08-31 10:55 IST

Photo | PTI

ರಾಂಚಿ: ಅರ್ಹತೆಯನ್ನು ಆಧರಿಸಿ ಪಕ್ಷಾತೀತವಾಗಿ ನನಗೆ ಬೆಂಬಲ ನೀಡುವಂತೆ ಶನಿವಾರ ಎಲ್ಲ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರಿಗೆ ಮನವಿ ಮಾಡಿದ ಇಂಡಿಯಾ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ, ಅವಕಾಶ ನೀಡಿದರೆ ನಾನು ಈ ಬಗ್ಗೆ ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಲು ಸಿದ್ಧ ಎಂದೂ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ಸುದರ್ಶನ್ ರೆಡ್ಡಿ, ನಾನು ಸ್ಪರ್ಧಿಸಿರುವ ಈ ಚುನಾವಣೆ ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಅತ್ಯಂತ ಸಭ್ಯ ಹಾಗೂ ನ್ಯಾಯಯುತ ಚುನಾವಣೆಯಾಗಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ಹೇಳಿದ್ದು, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನೂ ಪ್ರಶ್ನಿಸಿದ್ದಾರೆ. ಬಹುಮತ ಇದೆ ಎಂದ ಮಾತ್ರಕ್ಕೆ ಬಯಸಿದ್ದನ್ನೆಲ್ಲ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ನಾನು ಎಲ್ಲ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರಿಗೂ ಪತ್ರ ರವಾನಿಸಿದ್ದು, ನನ್ನ ಉಮೇದುವಾರಿಕೆಯನ್ನು ಅರ್ಹತೆಯ ಮೇಲೆ ಪರಿಗಣಿಸುವಂತೆ ಮನವಿ ಮಾಡಿದ್ದೇನೆ. ಒಂದು ವೇಳೆ ಅವಕಾಶ ನೀಡಿದರೆ, ಬಿಜೆಪಿಯ ಉನ್ನತ ನಾಯಕರ ಬೆಂಬಲ ಕೋರಲು ಅವರನ್ನು ಭೇಟಿ ಮಾಡಲೂ ಸಿದ್ಧ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಟೀಕಿಸಿದ ಅವರು, ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ಮತಪಟ್ಟಿಯಿಂದ ಹೊರ ಹಾಕುವ ಈ ಅಭಿಯಾನದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

“ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಎಂದರೇನು? ಇದು ಮತ್ತೊಂದು ಹೊಸ ಸಮಸ್ಯೆ. ವಿಶೇಷ ಪರಿಷ್ಕರಣೆ ನಡೆಸಲು ಸಾಧ್ಯಿವಿದೆ. ಮತಪಟ್ಟಿಯನ್ನು ಪರಿಷ್ಕರಿಸಬೇಕು ಹಾಗೂ ಮತದಾರರಲ್ಲದವರ ಹೆಸರುಗಳನ್ನು ತೆಗೆದು ಹಾಕಬೇಕು ಎಂಬ ಬಗ್ಗೆ ಯಾರದೂ ತಕರಾರಿಲ್ಲ. ಪ್ರಜಾಪ್ರಭುತ್ವವೆಂದರೆ ಕೇವಲ ಮತಗಳಲ್ಲ. ಬಹುಮತ ಇದೆ ಎಂದ ಮಾತ್ರಕ್ಕೆ ಏನನ್ನು ಬೇಕಾದರೂ ಮಾಡಲು ಅವಕಾಶ ಎಂದರ್ಥವಲ್ಲ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News