×
Ad

ಪತ್ನಿಯ ಅಡುಗೆ, ಬಟ್ಟೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

ಪತಿ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಾಲಯ

Update: 2025-08-09 13:14 IST

ಸಾಂದರ್ಭಿಕ ಚಿತ್ರ

ಮುಂಬೈ: ಸದ್ಯ ತನ್ನ ಪತಿಯನ್ನು ತೊರೆದಿರುವ ಪತ್ನಿಯು ಆತ ಹಾಗೂ ಆತನ ಕುಟುಂಬದ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಶುಕ್ರವಾರ ಬಾಂಬೆ ಹೈಕೋರ್ಟ್ ರದ್ದುಗೊಳಿಸಿದ್ದು, ಪತ್ನಿಯ ಅಡುಗೆ ಕೌಶಲ ಅಥವಾ ಉಡುಗೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಗಂಭೀರ ಕ್ರೌರ್ಯ ಅಥವಾ ಕಿರುಕುಳ ಅಲ್ಲ ಎಂದು ತೀರ್ಪು ನೀಡಿದೆ.

ಈ ಸಂಬಂಧ ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಿದ ನ್ಯಾ. ವಿಭಾ ಕಂಕನವಾಡಿ ಹಾಗೂ ನ್ಯಾ. ಸಂಜಯ್ ಎ. ದೇಶ್ ಮುಖ್ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠ, “ಪತ್ನಿಯು ಸರಿಯಾದ ಉಡುಪು ಧರಿಸುತ್ತಿಲ್ಲ ಅಥವಾ ಅಡುಗೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ ಎಂಬ ಕೋಪ ಬರಿಸುವ ಹೇಳಿಕೆಗಳನ್ನು ವ್ಯಕ್ತಪಡಿಸುವುದು ಗಂಭೀರ ಕ್ರೌರ್ಯ ಅಥವಾ ಕಿರುಕುಳ ಅಲ್ಲ” ಎಂದು ಅಭಿಪ್ರಾಯ ಪಟ್ಟಿತು.

“ಸಂಬಂಧಗಳು ಹಳಸಿದಾಗ, ಉತ್ಪ್ರೇಕ್ಷೆಯ ಆರೋಪಗಳನ್ನು ಮಾಡಲಾಗುತ್ತದೆ. ವಿವಾಹಕ್ಕೂ ಮುನ್ನವೇ ಎಲ್ಲವನ್ನೂ ಬಹಿರಂಗಗೊಳಿಸಿರುವಾಗ ಆರೋಪಗಳು ಉತ್ಪ್ರೇಕ್ಷೆಯದ್ದಾಗಿವೆ ಅಥವಾ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯ ಕಿರುಕುಳ ಪರಿಕಲ್ಪನೆಗೆ ಹೊಂದಿಕೆಯಾಗುವಂತಹ ಗಂಭೀರ ಸಂಗತಿಯಲ್ಲ. ಒಂದು ವೇಳೆ ಈ ಸಂಬಂಧ ಪ್ರಕರಣದ ವಿಚಾರಣೆ ಎದುರಿಸುವಂತೆ ಪತಿ ಹಾಗೂ ಆತನ ಕುಟುಂಬಕ್ಕೆ ಸೂಚಿಸಿದರೆ, ಅದು ಕಾನೂನಿನ ದುರುಪಯೋಗವಾಗಲಿದೆ” ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

2022ರಲ್ಲಿ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದ ಮಹಿಳೆಯೊಬ್ಬರು ದಾಖಲಿಸಿದ್ದ ಪ್ರಕರಣ ಇದಾಗಿತ್ತು. 2013ರಲ್ಲಿ ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನಗೊಂಡ ನಂತರ, ಇದು ಆಕೆಯ ಎರಡನೆ ವಿವಾಹವಾಗಿತ್ತು. ವಿವಾಹವಾದ ಕೇವಲ ಒಂದೆರಡು ತಿಂಗಳಲ್ಲೇ ಪತಿ ಹಾಗೂ ಪತಿಯ ಕುಟುಂಬದವರು ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅಲ್ಲದೆ ನನ್ನ ಪತಿಯ ಕುಟುಂಬದವರು ಆತನ ಮಾನಸಿಕ ಹಾಗೂ ದೈಹಿಕ ನ್ಯೂನತೆಗಳನ್ನು ವಿವಾಹಕ್ಕೂ ಮುನ್ನ ಮರೆಮಾಚಿದ್ದರು ಎಂದು ಆಕೆ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News