×
Ad

ಖ್ಯಾತ ಸಂಖ್ಯಾ ಶಾಸ್ತ್ರಜ್ಞ ರಾಧಾಕೃಷ್ಣ ರಾವ್ ನಿಧನ

Update: 2023-08-23 21:12 IST

ಕಲ್ಯಾಂಪುಡಿ ರಾಧಾಕೃಷ್ಣ ರಾವ್ | Photo: PTI 

ಹೊಸದಿಲ್ಲಿ: ಭಾರತದ ಪ್ರಮುಖ ಸಂಖ್ಯಾಶಾಸ್ತ್ರಜ್ಞರಲ್ಲೊಬ್ಬರಾದ ಕಲ್ಯಾಂಪುಡಿ ರಾಧಾಕೃಷ್ಣ ರಾವ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು. ಉದ್ಯಮ ಕ್ಷೇತ್ರದಿಂದ ಹಿಡಿದು ಔಷಧಿರಂಗದವರೆ, ಜನಾಂಗೀಯ ಶಾಸ್ತ್ರದಿಂದ ಹಿಡಿದು ಅರ್ಥಶಾಸ್ತ್ರದವರೆಗಿನ ಕ್ಷೇತ್ರಗಳ ಅಧ್ಯಯನದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸುವಲ್ಲಿ ರಾವ್ ಅಪಾರ ಕೊಡುಗೆ ನೀಡಿದ್ದಾರೆ. 2023ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿಗೆ ಸರಿಸಮಾನವಾದ ಸಂಖ್ಯಾಶಾಸ್ತ್ರಕ್ಕಾಗಿನ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.

ರಾವ್ ಅವರು ಅಂದಾಜು ಸಿದ್ದಾಂತ, ವಿಭಿನ್ನಾತ್ಮಕ ರೇಖಾಶಾಸ್ತ್ರ ಹಾಗೂ ಬಹುವಿಧದ ವಿಶ್ಲೇಷಣಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೇಂದ್ರೀಯ ಅಂಕಿಶಾಸ್ತ್ರ ಕಾರ್ಯಾಲಯ, ಭಾರತೀಯ ಅಂಕಿಅಂಶ ಸಂಸ್ಥೆ (ಐಎಸ್‌ಐ) ಹಾಗೂ 2013ರಲ್ಲಿ ಸ್ಥಾಪನೆಗೊಂಡ ಹೈದರಾಬಾದ್‌ನ ಸಿ.ಆರ್.ರಾವ್ ಸುಧಾರಿತ ಗಣಿತಶಾಸ್ತ್ರ ಸಂಸ್ಥೆ, ಅಂಕಿಅಂಶ ಹಾಗೂ ಕಂಪ್ಯೂಟರ್ ಶಾಸ್ತ್ರ (ಎಐಎಂಎಸ್‌ಸಿಎಸ್)ದಲ್ಲಿ ಅವರ ಪ್ರಭಾವ ಎದ್ದುಕಾಣುತ್ತಿತ್ತು.

ಏಳು ದಶಕಗಳಿಗೂ ಮೀರಿದ ತನ್ನ ವೃತ್ತಿ ಬದುಕಿನಲ್ಲಿ ರಾವ್ ಅವರು 51 ಮಂದಿ ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು, ರಾವ್ ಅವರಿಂದ ತರಬೇತಿ, ಮಾರ್ಗದರ್ಶನ ಪಡೆದ ಕೆ.ಆರ್.ಪಾರ್ಥಸಾರಥಿ, ವಿ.ಎಸ್.ವರದರಾಜನ್ ಹಾಗೂ 2007ರಲ್ಲಿ ಪ್ರತಿಷ್ಠಿತ ಆಬೆಲ್ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ವರದನ್ ತಮ್ಮ ಅಸಾಧಾರಣ ಸಾಧನೆಗಳಿಂದಾಗಿ ದೇಶ, ವಿದೇಶಗಳಲ್ಲಿ ಖ್ಯಾತಿಪಡೆದವರಾಗಿದ್ದಾರೆ.

ರಾವ್ ಅವರು ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ, ಪಿಟ್ಸ್‌ಬರ್ಗ್ ವಿವಿಯಲ್ಲಿ ಪ್ರೊಫೆಸರ್ ಹಾಗೂ ಪೆನ್ಸಿಲ್ವೇನಿಯಾ ರಾಜ್ಯ ವಿವಿಯಲ್ಲಿ ಮಲ್ಟಿವೆರಿಯೇಟ್ ಆನಾಲಿಸಿಸ್ ಫಾರ್ ಸೆಂಟರ್ ಸಂಸ್ತೆಯ ನಿರ್ದೇಶಕ ಸೇರಿದಂತೆ ಹಲವಾರು ಪ್ರತಿಷ್ಠಿ ಸಂಶೋಧನಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ಪೆನ್ಸಿಲ್ವೇನಿಯಾ ರಾಜ್ಯ ವಿಇ ಹಾಗೂ ಬಫೆಲೊ ವಿವಿಯಲ್ಲಿ ಸಂಶೋಧನಾ ಪ್ರೊಫೆಸರ್ ಆಗಿ ಅವರು ಕಾರ್ಯನಿರ್ವಹಿಸಿದ್ದರು. ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾದ ರಾವ್ ಅವರಿಗೆ 1968ರಲ್ಲಿ ಪದ್ಮಭೂಷಣ ಹಾಗೂ 2001ರಲ್ಲಿ ಪದ್ಮವಿಭೂಷಣ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

ತನ್ನ ಆರನೇ ವಯಸ್ಸಿನಲ್ಲೇ ಗಣಿತಶಾಸ್ತ್ರದಲ್ಲಿ ಅಸಾಧಾರಣ ಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದ ರಾವ್ ಅವರು ಗ್ಲಿಂಪ್ಸಸ್ ಆಫ್ ಇಂಡಿಯಾಸ್ ಸ್ಟಾಟಿಸ್ಟಿಕಲ್ ಹೆರಿಟೇಜ್ (1992, ವಿಲ್ಲೆ ಈಸ್ಟರ್ನ್ ಲಿಮಿಟೆಡ್) ಎಂಬ ಆತ್ಮಕಥೆಯನ್ನು ಬರೆದಿದ್ದರು. ರಾವ್ ಅವರು ಪ್ರಬಂಧಗಳ ಸಂಗ್ರಹವನ್ನು ಕೂಡಾ ಬರೆದಿದ್ದು,ಅದನ್ನು ಜೆ.ಕೆ.ಘೋಷ್, ಎಸ್.ಕೆ.ಮಿತ್ರಾ ಹಾಗೂ ಕೆ.ಆರ್.ಪಾರ್ಥಸಾರಥಿ ಸಂಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News