ಕೇರಳ | ಗೌಪ್ಯವಾಗಿ ನಡೆಯಲಿರುವ ಬ್ರಿಟನ್‌ನ ಎಫ್-35ಬಿ ಯುದ್ಧ ವಿಮಾನದ ದುರಸ್ತಿ!
Photo credit: mathrubhumi.com
ತಿರುವನಂತಪುರಂ : ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಂಡಿರುವ ಬ್ರಿಟನ್ ರಾಯಲ್ ಏರ್ ಫೋರ್ಸ್‌ಗೆ ಸೇರಿದ ಎಫ್ -35 ಬಿ ಫೈಟರ್ ಜೆಟ್ ಅನ್ನು ದುರಸ್ತಿ ಮಾಡಲು ಯುನೈಟೆಡ್ ಕಿಂಗ್‌ಡಮ್ (ಯುಕೆ) ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ ಯುದ್ಧ ವಿಮಾನದ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಅತ್ಯಂತ ರಹಸ್ಯವಾಗಿಡಲಾಗುತ್ತದೆ ಎಂದು ವರದಿಯಾಗಿದೆ.
ಫೈಟರ್ ಜೆಟ್‌ನ ದುರಸ್ತಿ ಮತ್ತು ನಿರ್ವಹಣಾ ವಿಷಯಗಳ ಬಗ್ಗೆ ಅಥವಾ ಭಾರತ ಸರಕಾರದ ಜೊತೆಗಿನ ಖಾಸಗಿ ಚರ್ಚೆಗಳ ಬಗ್ಗೆ ಬ್ರಿಟನ್ ಅಧಿಕಾರಿಗಳು ಯಾವುದೇ ವಿವರಗಳನ್ನು ನೀಡುವುದಿಲ್ಲ ಎಂದು ಬ್ರಿಟನ್ ಸರಕಾರದ ಆಪ್ತ ಮೂಲಗಳು ದೃಢಪಡಿಸಿವೆ.
ಕೇರಳದಲ್ಲಿ ವಿಮಾನದ ನಿರ್ವಹಣೆ ಮತ್ತು ದುರಸ್ತಿ ಪೂರ್ಣಗೊಂಡ ನಂತರ ಸುರಕ್ಷತಾ ತಪಾಸಣೆಗಳೊಂದಿಗೆ ರಾಯಲ್ ಏರ್ ಫೋರ್ಸ್‌ನ ಸಕ್ರಿಯ ಸೇವೆಗೆ ಫೈಟರ್ ಜೆಟ್ ಅನ್ನು ಮತ್ತೆ ತರಲಾಗುವುದು ಎಂಬ ವಿಶ್ವಾಸವನ್ನು ಬ್ರಿಟನ್ ಸರಕಾರದ ಮೂಲಗಳು ವ್ಯಕ್ತಪಡಿಸಿದೆ.
ಬ್ರಿಟನ್‌ನ ರಾಯಲ್ ನೌಕಾಪಡೆಗೆ ಸೇರಿದ ಅತ್ಯಾಧುನಿಕ F-35B ಯುದ್ಧ ವಿಮಾನವೊಂದು ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಈ ವಿಮಾನ, ಜಗತ್ತಿನ ಅತ್ಯಂತ ದುಬಾರಿ ಮತ್ತು ಸುಧಾರಿತ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.
ಬ್ರಿಟಿಷ್ ಹೈಕಮಿಷನ್ ವಕ್ತಾರರು, ವಿಮಾನವು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ನಂತರ ತುರ್ತು ಭೂಸ್ಪರ್ಶ ಮಾಡಿದೆ ಮತ್ತು ದುರಸ್ತಿಗಾಗಿ ಕಾಯುತ್ತಿದೆ ಎಂದು ಹೇಳಿದ್ದರು.
ಬ್ರಿಟನ್‌ನಿಂದ ಎಂಜಿನಿಯರ್‌ಗಳ ತಂಡ ವಿಶೇಷ ಉಪಕರಣಗಳೊಂದಿಗೆ ಬಂದ ನಂತರ ವಿಮಾನವನ್ನು ನಿರ್ವಹಣೆ ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆಗಾಗಿ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ತಜ್ಞರ ತಂಡ ಯಾವಾಗ ಬರುತ್ತದೆ ಮತ್ತು ಏಕೆ ಅತಿಯಾದ ವಿಳಂಬವಾಗಿದೆ ಎಂಬುದರ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.