ಉತ್ತರಪ್ರದೇಶ: ಪತ್ರಕರ್ತ, ಆರ್ಟಿಐ ಕಾರ್ಯಕರ್ತನ ಹತ್ಯೆ
ಲಕ್ನೋ: ಹಿಂದಿ ದೈನಿಕವೊಂದರ ವರದಿಗಾರ ಹಾಗೂ 36 ವರ್ಷ ವಯಸ್ಸಿನ ಆರ್ಟಿಐ ಕಾರ್ಯಕರ್ತ ರಾಘವೇಂದ್ರ ಬಾಜಪೇಯಿ ಎಂಬುವವರನ್ನು ಸೀತಾಪುರದಲ್ಲಿ ಶನಿವಾರ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೋಟರ್ಬೈಕ್ನಲ್ಲಿ ಆಗಮಿಸಿದ್ದ ಹಂತಕರು ಬಾಜಪೇಯಿಯವರ ಬೈಕ್ಗೆ ಡಿಕ್ಕಿ ಹೊಡೆದು ಅವರು ಬೀಳುವಂತೆ ಮಾಡಿದರು. ನೆಲದ ಮೇಲೆ ಬಿದ್ದ ಬಾಜಪೇಯಿಯವರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತೀವ್ರ ಗಾಯಗೊಂಡಿದ್ದ ಬಾಜಪೇಯಿಯವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು; ಆದರೆ ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು. ಎದೆ ಮತ್ತು ಭುಜಕ್ಕೆ ಗುಂಡೇಟು ತಗುಲಿದ್ದು, ಅವರು ಧರಿಸಿದ್ದ ಬಟ್ಟೆಯಲ್ಲಿ ಒಂದು ಗುಂಡು ಪತ್ತೆಯಾಗಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಲಕ್ನೋ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಹೇಮಪುರ ರೈಲ್ವೆ ಕ್ರಾಸಿಂಗ್ ಬಳಿ ಮಧ್ಯಾಹ್ನ 3ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಸೀತಾಪುರ ಎಸ್ಪಿ ಚಕ್ರೇಶ್ ಮಿಶ್ರಾ ವಿವರಿಸಿದ್ದಾರೆ.
ಮೋಟರ್ಸೈಕಲ್ನಲ್ಲಿ ಮನೆಯಿಂದ ಹೊರಡುವ ಸಂದರ್ಭದಲ್ಲಿ ಅವರಿಗೆ ಫೋನ್ ಕರೆ ಬಂದಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ. ಇದಾದ ಕೆಲವೇ ಸಮಯದಲ್ಲಿ ಈ ಮಾರಣಾಂತಿಕ ದಾಳಿ ನಡೆದ ಸುದ್ದಿ ಬಂದಿದೆ. ಬಾಜಪೇಯಿಯವರ ಕೆಲ ವರದಿಗಳ ಹಿನ್ನೆಲೆಯಲ್ಲಿ 10 ದಿನಕ್ಕೆ ಮುನ್ನ ಬೆದರಿಕೆ ಕರೆ ಬಂದಿತ್ತು ಎಂದು ಕುಟುಂಬದವರು ಹೇಳಿದ್ದಾರೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ.